ಬೆಂಗಳೂರು: ಬೆಂಗಳೂರಿನ ಗೌರಿಪಾಳ್ಯವನ್ನು ‘ಪಾಕಿಸ್ತಾನ’ಕ್ಕೆ ಹೋಲಿಕೆ ಮಾಡಿ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಷಾನಂದ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ತೀವ್ರ ಅಸಮಾಧಾನ ಹೊರಹಾಕಿತು. ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಇಂತಹ ಹೇಳಿಕೆ ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾದುದೆಂದು ಅಭಿಪ್ರಾಯಪಟ್ಟಿತು.
ಪ್ರಕರಣಕ್ಕೆ ತೆರೆ: ತಮ್ಮ ವೈಯಕ್ತಿಕ ಪೂರ್ವಾಗ್ರಹಗಳು ಕರ್ತವ್ಯದ ಮೇಲೆ ಪ್ರತಿಫಲಿಸದಂತೆ ವಕೀಲರು ಮತ್ತು ನ್ಯಾಯಾಧೀಶರು ಎಚ್ಚರದಿಂದಿರಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯಪೀಠ ಅಭಿಪ್ರಾಯಪಟ್ಟಿತು. ಬಳಿಕ ತಮ್ಮ ಈ ಹೇಳಿಕೆಗಾಗಿ ನ್ಯಾಯಮೂರ್ತಿ ಶ್ರೀಷಾನಂದ ಕ್ಷಮೆ ಯಾಚಿಸಿದ್ದಾರೆಂಬ ಅಂಶ ಪರಿಗಣನೆಗೆ ತೆಗೆದುಕೊಂಡು ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿತು.
ಕಲಾಪಗಳ ನೇರ ಪ್ರಸಾರ ಪ್ರಸ್ತಾಪಿಸಿದ ನ್ಯಾಯಾಲಯ, ಎ್ಲ ಕಕ್ಷಿದಾರರು, ನ್ಯಾಯಾಧೀಶರು, ವಕೀಲರು, ಕಲಾಪದ ನೇರ ಪ್ರಸಾರವು ಸಾಕಷ್ಟು ಜನರನ್ನು ತಲುಪುತ್ತದೆ ಎಂದು ತಿಳಿದಿರಬೇಕು. ಹೀಗಾಗಿ ಸಮುದಾಯದ ಮೇಲೆ ಅವಲೋಕನ ಮಾಡುವಾಗ ಅದು ಬೀರುವ ವ್ಯಾಪಕ ಪ್ರಭಾವದ ಬಗ್ಗೆ ಎಲ್ಲರೂ ಅರಿತಿರಬೇಕು. ಪ್ರತಿಯೊಬ್ಬ ವ್ಯಕ್ತಿಯು ಜೀವನದ ಅನುಭವಗಳ ಆಧಾರದ ಮೇಲೆ ತಮ್ಮದೇ ಆದ ಮನೋಧೋರಣೆ ಹೊಂದಿರುವ ಬಗ್ಗೆ ನ್ಯಾಯಾಧೀಶರಾಗಿ ನಮಗೆ ಅರಿವಿರುತ್ತದೆ. ನ್ಯಾಯಾಧೀಶರು ನಿಷ್ಪಕ್ಷಪಾತವಾಗಿದ್ದಾಗ ಮಾತ್ರ ನಾವು ವಸ್ತುನಿಷ್ಠ ನ್ಯಾಯವನ್ನು ನೀಡಬಹುದು ಎಂದು ಪ್ರತಿಪಾದಿಸಿತು.
ನ್ಯಾಯಾಂಗ ನಿರ್ಧಾರ ಕೈಗೊಳ್ಳುವಂತಹ ಮಾರ್ಗದರ್ಶಿ ಮೌಲ್ಯಗಳು ಸಂವಿಧಾನದಲ್ಲಿ ಮಾತ್ರವೇ ಇರುತ್ತವೆ ಎಂಬುದನ್ನು ನ್ಯಾಯಾಂಗದ ಎ್ಲ ಪಾಲುದಾರರು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಹೇಳಿದೆ.
ನಮಗೆ ಕಳವಳ ಇದೆ...
ಸಾಂದರ್ಭಿಕವಾಗಿ ಲಿಂಗ, ಸಮುದಾಯಕ್ಕೆ ಸಂಬಂಧಿಸಿದ ಹೇಳಿಕೆ ನೀಡುವಾಗ ವೈಯಕ್ತಿಕ ಪಕ್ಷಪಾತದಿಂದ ಕೂಡಿದೆ ಎಂದು ಗ್ರಹಿಸಬಹುದು. ಹೀಗಾಗಿ ಪುರುಷ ಪ್ರಧಾನ ಅಥವಾ ಸ್ತ್ರೀ ದ್ವೇಷದ ಹೇಳಿಕೆ ನೀಡುವಾಗ ಜಾಗರೂಕರಾಗಿರಬೇಕು. ನಿರ್ದಿಷ್ಟ ಲಿಂಗ, ಸಮುದಾಯದ ಮೇಲಿನ ಅವಲೋಕನಗಳ ಬಗ್ಗೆ ನಮಗೆ ಗಂಭೀರ ಕಳವಳ ಇದೆ. ಅಂತಹ ಅವಲೋಕನಗಳನ್ನು ನಕಾರಾತ್ಮಕವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ನ್ಯಾಯಿಕ ಪ್ರಕ್ರಿಯೆಯಲ್ಲಿನ ಎ್ಲ ಭಾಗೀದಾರರು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಪಕ್ಷಪಾತವಿಲ್ಲದೆ ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ, ನ್ಯಾಯಾಧೀಶರ ಯಾವುದೇ ಅವಲೋಕನಗಳು ವ್ಯಾಪಕ ಪರಿಣಾಮ ಬೀರುವುದರಿಂದ ನ್ಯಾಯಾಧೀಶರು ತಮ್ಮ ಮನೋಧೋರಣೆ ಅರಿತಿರಬೇಕು. ಇದರಿಂದ ಅವರು ನಿಷ್ಪಕ್ಷಪಾತವಾಗಿ ನ್ಯಾಯ ನೀಡಬಹುದು ಎಂದು ಮನವರಿಕೆ ಮಾಡಿಕೊಟ್ಟಿತು.
ಏನಿದು ಪ್ರಕರಣ ?
ಬೆಂಗಳೂರಿನ ಗೌರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದು ಮಿನಿ ಪಾಕಿಸ್ತಾನದಂತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಷಾನಂದ ಕಳೆದ ಆ.28ರಂದು ಹೇಳಿದ್ದರು.