ನಂಜನಗೂಡಿನಲ್ಲಿ ಹಿರಿಯ ಪತ್ರಕರ್ತ ಎಸ್.ಗಂಗಾಧರ್ ಅವರಿಗೆ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ದರ್ಶನ್ ಧ್ರುವನಾರಾಯಣ, ಕೆ.ಎಲ್.ರೇವಣ್ಣಸ್ವಾಮಿ, ಎಂ.ಸುಬ್ರಹ್ಮಣ್ಯ ಇದ್ದರು. 
ನ್ಯೂಸ್

ದೇಶ ಪ್ರಗತಿಯಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದು

ನಂಜನಗೂಡು: ಮಾಧ್ಯಮ ಸ್ವಾತಂತ್ರ್ಯವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಪ್ರಗತಿಯಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ತರವಾದದ್ದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶ ಹಾಗೂ ರಾಜ್ಯದ ಪ್ರಗತಿಯಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದಿದೆ. ಅಸಕ್ತರು, ಬಡವರು, ದೀನ ದಲಿತರ ಧ್ವನಿಯಾಗಿ ಸರ್ಕಾರವನ್ನು ಕಣ್ತೆರೆಸುವಲ್ಲಿ ಪತ್ರಕರ್ತರು ಸಾಕಷ್ಟು ನೆರವಾಗಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಮಾಧ್ಯಮ ಸ್ವಾತಂತ್ರ್ಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಪತ್ರಕರ್ತರಿಗೆ ನಿವೇಶನ ಹಂಚಿಕೆ ವಿಚಾರವಾಗಿ ಅಹವಾಲು ಸ್ವೀಕರಿಸಿದ್ದು, ಈ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ನಿವೇಶನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ ಮಾತನಾಡಿ, ಸದಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಪತ್ರಕರ್ತರನ್ನು ಉತ್ತೇಜಿಸುವ ಸಲುವಾಗಿ ಕಳೆದ 12 ವರ್ಷಗಳಿಂದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ ಸಾಧಕ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತಿದೆ ಎಂದರು.
ಹಿರಿಯ ಪತ್ರಕರ್ತ ಎಸ್.ಗಂಗಾಧರ್ ಅವರಿಗೆ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿಟಿಜನ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಜಾವಿದ್ ಅಹಮದ್ ಅವರ ಹೆಸರಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ಮಶೂದಾ ಬೇಗಂ ಅವರು ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಘೋಷಣೆ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ಕಾರ್ಯದರ್ಶಿ ಎಂ.ಮಹದೇವು, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ.ದೀಪಕ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹುಲ್ಲಹಳ್ಳಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಸತ್ಯನಾರಾಯಣ ಉಪಸ್ಥಿತರಿದ್ದರು.