ನ್ಯೂಸ್

ದೇಶ ಕಟ್ಟುವ ಕೆಲಸ ಮಾಡಬೇಕು

ಎಚ್.ಡಿ. ಕೋಟೆ: ಪ್ರತಿಯೊಬ್ಬ ಪ್ರಜೆಯೂ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಕಿರಿಯ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಬಲಿದಾನ ಮಾಡಿದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ತಾಲೂಕಿನಲ್ಲಿ ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಕಾಣುವ ಕೆಲಸವನ್ನು ಕಳೆದ ಆರು ವರ್ಷಗಳಿಂದ ಮಾಡುತ್ತಿದ್ದೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವಲ್ಲಿ ಬದ್ಧನಾಗಿದ್ದೇನೆ ಎಂದರು.
ಗೌರವ ಸಲ್ಲಿಸೋಣ:
ಹನುಗೋಡು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ, ಸರ್ದಾರ್ ಪಟೇಲ್, ಬಾಲ ಗಂಗಾಧರ ತಿಲಕ್ ಮೊದಲಾದವರನ್ನು ಗೌರವಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.
ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಸ್ವತಂತ್ರ ಪೂರ್ವದಲ್ಲಿ ಸಾವಿರಾರು ಹೋರಾಟಗಾರರು ರಕ್ತವನ್ನು ಹರಿಸಿದ್ದಾರೆ. ಇಂದಿನ ಯುವ ಪೀಳಿಗೆ ದೇಶ ಕಟ್ಟುವ ಕೆಲಸ ಮಾಡಲು ಹುತಾತ್ಮರೆಲ್ಲರ ತ್ಯಾಗವೇ ಸ್ಫೂರ್ತಿಯಾಗಬೇಕು ಎಂದರು. ತಹಸೀಲ್ದಾರ್ ಸಣ್ಣರಾಮಪ್ಪ ಮಾತನಾಡಿದರು. ಪುರಸಭಾ ಸದಸ್ಯರಾದ ನರಸಿಂಹಮೂರ್ತಿ, ಮಧು ಕುಮಾರ್, ಸೋಮಶೇಖರ, ಸಿಪಿಐ ಶಬ್ಬೀರ್ ಹುಸೇನ್, ಇಒ ಧರಣೀಶ್, ಕನ್ನಡ ಪ್ರಮೋದ, ಉಪನ್ಯಾಸಕ ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಸುರೇಶ್ ಇದ್ದರು.
ಶಾಸಕ ಅನಿಲ್ ಚಿಕ್ಕಮಾದು ಅವರು ತಮ್ಮ ತಂದೆ ಚಿಕ್ಕಮಾದು ಸ್ಮರಣಾರ್ಥ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದರು.