ಬೀರೂರು: ಪಟ್ಟಣದಲ್ಲಿ ಮಂಗಳವಾರ ನಡೆಯುವ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು ನಾಗರಿಕರು ಹರಕೆ ತೀರಿಸಲು ಕುರಿ, ಟಗರು, ಮೇಕೆಗಳ ಖರೀದಿ ಜೋರಾಗಿ
ನಡೆಸಿದರು.
ಬೀರೂರಿನಲ್ಲಿ ಪ್ರತಿವರ್ಷಅಂತರಘಟ್ಟಮ್ಮನ ಹಬ್ಬವು ಅಮ್ಮನ ಹಬ್ಬ ಎಂದೇ ಖ್ಯಾತಿಯಾಗಿದೆ. ಹಬ್ಬದ ಅಂಗವಾಗಿ ಮನೆಗಳಿಗೆ ಸುಣ್ಣ ಬಣ್ಣಗಳಿಂದ ಸಿಂಗಾರ, ಹೊಸ ಬಟ್ಟೆಗಳನ್ನು ಖರೀದಿಸುವ
ಪ್ರತೀತಿ ಇದೆ. ಹಬ್ಬದಲ್ಲಿ ಜಾತ್ರೆಗೆ ಎತ್ತಿನ ಬಂಡಿಗಳನ್ನು ಹೂಡಲು ಎತ್ತುಗಳನ್ನು ತೊಳೆದು ಕೋಡುಗಳಿಗೆ ಬಣ್ಣ ಹಾಗೂ ಬಂಡಿಗಳಿಗೆ ರಂಗುರಂಗಿನ ಬಣ್ಣಗಳನ್ನು ಲೇಪಿಸಿ ಜಾತ್ರೆಯಲ್ಲಿ ಓಡಿಸಿ
ಜನ, ಜಾನುವಾರುಗಳನ್ನು ತಾಯಿ ಕಾಪಾಡಲಿ ಎಂದು ಭಕ್ತಿ ಸಮರ್ಪಿಸುತ್ತಾರೆ. ಅಮ್ಮನ ಹಬ್ಬದಲ್ಲಿ ಬಾಡೂಟವೇ ವಿಶೇಷವಾದ್ದರಿಂದ ಟಗರು, ಕುರಿ ಹಾಗೂ ಮೇಕೆಗಳನ್ನು ಹರಕೆಗೆ ತಂದು ಅಮ್ಮನಿಗೆ ಬಲಿ ನೀಡಿ ವಿವಿಧ ಬಗೆಯ ಭಕ್ಷೃಗಳನ್ನು ತಯಾರಿಸುತ್ತಾರೆ. ಅಮ್ಮನಿಗೆ
ಎಡೆ ನೀಡಿದ ನಂತರ ಬಾಡೂಟ ಸವಿಯುತ್ತಾರೆ. ಹಬ್ಬಕ್ಕಾಗಿಯೇ ಬಂಧುಗಳನ್ನು ಹಬ್ಬದ ಮುನ್ನವೇ ಆಹ್ವಾನಿಸುತ್ತಾರೆ. ಇಲ್ಲಿ ಹಬ್ಬದ ನಂತರ ಶುಕ್ರವಾರ ಅಂತರಘಟ್ಟೆಯಲ್ಲಿ ನಡೆಯುವ ಜಾತ್ರೆಗೆ
ಹೊರಡಲು ಸಿದ್ಧರಾಗುತ್ತಾರೆ. ಗಣಪತಿ ಪೆಂಡಾಲ್ ಆವರಣದಲ್ಲಿ ಟಗರು, ಕುರಿಗಳ ಸಂತೆ ಶನಿವಾರದಿಂದಲೇ ಆರಂಭವಾಗಿತ್ತು. ಹೊಸದುರ್ಗ, ಕಡೂರು, ಚಿತ್ರದುರ್ಗ, ಭದ್ರಾವತಿ, ಚನ್ನಗಿರಿ ಕಡೆಗಳಿಂದ ಅಲ್ಲದೆ ಅಜ್ಜಂಪುರದ ಗ್ರಾಮಗಳಿಂದಲೂ ಕುರಿಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಕುರಿಯ ಬೆಲೆ 15 ಸಾವಿರ ರೂ. ದಿಂದ 25 ಸಾವಿರ ರೂ. ಹಾಗೂ ಟಗರಿನ ಬೆಲೆಯೂ 25 ಸಾವಿರದಿಂದ 45 ಸಾವಿರ ರೂ. ವರೆಗೂ ಇತ್ತು.