ಬಿಜೆಪಿ ಕಾರ್ಯಕಾರಿಣಿ ಉದ್ದೇಶಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಮತ್ತಿತರರಿದ್ದರು. 
ನ್ಯೂಸ್

ದೇವಾಲಯಗಳ ರಕ್ಷಣೆಗೆ ಕಾನೂನಾಸ್ತ್ರ?; ಕಾಯ್ದೆ ತಿದ್ದುಪಡಿ ಕುರಿತು ಇಂದು ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ

| ಮೃತ್ಯುಂಜಯ ಕಪಗಲ್ ಬೆಂಗಳೂರು

ಆಡಳಿತಕ್ಕೆ ಚುರುಕು, ಅಭಿವೃದ್ಧಿಗೆ ವೇಗ, ಜನಪರ ಘೋಷಣೆಯೊಂದಿಗೆ ಹೊಸ ಹುಮ್ಮಸ್ಸಿನಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೀಗ ‘ದೇಗುಲಗಳ ವಿವಾದ’ಕ್ಕೆ ತೆರೆ ಎಳೆಯುವ ಇಕ್ಕಟ್ಟಿನಿಂದ ಪಾರಾಗಲು ಮುಂದಾಗಿದೆ. ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಪರಿಹಾರ ಸೂತ್ರವೊಂದು ಸಿದ್ಧವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಂಜನಗೂಡಿನಲ್ಲಿ ದೇವಸ್ಥಾನ ತೆರವುಗೊಳಿಸಿದ ಬಳಿಕ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ರವಾನಿಸುವ ಮೂಲಕ ತೆರವಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ನಂತರ ಹಲವು ಸಚಿವರ ಜತೆಗೂ ಒಂದು ಸುತ್ತಿನ ಸಭೆ ನಡೆಸಿರುವ ಅವರು ಕಾನೂನು ತಜ್ಞರೊಂದಿಗೆ ರ್ಚಚಿಸಿ ರಾಜ್ಯದ ಎಲ್ಲ ದೇವಸ್ಥಾನಗಳ ರಕ್ಷಣೆಗೆ ಪರಿಹಾರ ಸೂತ್ರ ಸಿದ್ಧಪಡಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲೂ ಇದಕ್ಕೆ ಸ್ಪಷ್ಟರೂಪ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸರ್ಕಾರದ ಹೊಣೆಗಾರಿಕೆ: ನಂಜನಗೂಡಿನ ದೇಗುಲ ತೆರವುಗೊಳಿಸಿದ ಬಳಿಕ ಗುಡಿಗಳ ರಕ್ಷಣೆ ವಿಷಯವಷ್ಟೇ ಚರ್ಚೆಯ ಮುನ್ನೆಲೆಗೆ ಬಂದಿದ್ದು, ಇದೇ ಪರಿಸ್ಥಿತಿ ಎದುರಿಸುತ್ತಿರುವ ಎಲ್ಲ ಧಾರ್ವಿುಕ ಕೇಂದ್ರಗಳ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳಬೇಕಾಗಿದೆ. ಆದೇಶ ಅನುಷ್ಠಾನ ಮಾಡಿದ ಬಗ್ಗೆ ಆಯಾ ಜಿಲ್ಲಾ ಆಡಳಿತ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್​ಗೆ ನಿಗದಿತ ಗಡುವಿನೊಳಗೆ ಸಲ್ಲಿಸಬೇಕಾಗಿದ್ದು, ಬಿಕ್ಕಟ್ಟು ಇತ್ಯರ್ಥಕ್ಕೆ ಸರ್ಕಾರದ ಮಧ್ಯ ಪ್ರವೇಶ ಹಾಗೂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಕೆ ಹೊಣೆ ಹೊರಲು ಸಾಧ್ಯವಿದೆಯೇ ? ಎಂಬ ಜಿಜ್ಞಾಸೆಯಿದೆ. ಜತೆಗೆ ಕಾನೂನು ತಿದ್ದುಪಡಿ ಮಾಡುವ ಮೂಲಕ ದೇವಸ್ಥಾನಗಳ ರಕ್ಷಣೆ ಅಥವಾ ಪುನರ್ ನಿರ್ಮಾಣ ಮಾಡಬಹುದಾದಂತಹ ಸಾಧ್ಯತೆಗಳು ಸರ್ಕಾರದ ಮುಂದಿವೆ. ಈ ಅಂಶವನ್ನು ಸುಪ್ರೀಂಕೋರ್ಟ್ ಗಮನಕ್ಕೂ ತರಲಾಗುತ್ತದೆ.

ಆಡಳಿತದ ಮೇಲೆ ತೂಗುಗತ್ತಿ: ಈ ಸವಾಲು ಜಿಲ್ಲಾ ಆಡಳಿತಗಳಿಗೆ ದಿಢೀರ್ ಎದುರಾದದ್ದೇನಲ್ಲ. 2009ರ ಸೆ.29ರ ಸುಪ್ರೀಂ ಕೋರ್ಟ್ ಆದೇಶವನ್ನು 2021ರ ಡಿಸೆಂಬರ್ ಅಂತ್ಯದೊಳಗೆ ಅನುಷ್ಠಾನಗೊಳಿಸಿ ಆಯಾ ಜಿಲ್ಲಾ ಆಡಳಿತಗಳು ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ 2009ರ ಪೂರ್ವ ಹಾಗೂ ನಂತರ ನಿರ್ವಿುಸಿದ ದೇಗುಲ, ಮಸೀದಿ, ಗೋರಿ, ಚರ್ಚ್ ಇನ್ನಿತರ ಧಾರ್ವಿುಕ ಕೇಂದ್ರಗಳನ್ನು ತೆರವುಗೊಳಿಸಲು ಸುಪ್ರೀಂ ಸೂಚಿಸಿತ್ತು. ಈ ಆದೇಶದ ಅನುಷ್ಠಾನವು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿದೆ.

ಮೈಸೂರು ಮಾತ್ರವಲ್ಲದೆ ರಾಜ್ಯದಲ್ಲಿ ಒಟ್ಟಾರೆ 2,818 ದೇಗುಲಗಳು ತೆರವಿನ ತೂಗುಗತ್ತಿ ಎದುರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ 667, ಚಾಮರಾಜನಗರ ಜಿಲ್ಲೆಯಲ್ಲಿ ಒಂದು ದೇವಸ್ಥಾನ ಈ ಪಟ್ಟಿಯಲ್ಲಿದೆ. ಮಸೀದಿ, ಚರ್ಚ್ ಇನ್ನಿತರ ಧಾರ್ವಿುಕ ಕೇಂದ್ರಗಳನ್ನು ಸೇರಿಸಿದರೆ ತೆರವಿನ ಪಟ್ಟಿ ದೊಡ್ಡದಾಗಲಿದ್ದು, ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಹೊಸತರಲ್ಲಿ ಕೆಲವು ಜಿಲ್ಲೆಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿದ್ದರಿಂದ ತೆರವಿನ ಹೊರೆ ಇಳಿದಿದೆ ಎಂದು ಮೂಲಗಳು ಹೇಳಿವೆ.

ಒತ್ತಾಸೆಗೆ ಸ್ಪಂದನೆ: ದೇವಸ್ಥಾನಗಳ ನೆಲಸಮ ಕಾರ್ಯಾಚರಣೆಗೆ ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ದೇವಸ್ಥಾನಗಳನ್ನು ಒಡೆಯಬಾರದು ಎಂಬ ನಿರ್ಣಯವನ್ನು ಬಿಜೆಪಿ ರಾಜ್ಯ ಕೋರ್ ಕಮಿಟಿ ಅಂಗೀಕರಿಸುವ ಮೂಲಕ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಸ್ಪಷ್ಟ ಹಾಗೂ ದೃಢ ಸಂದೇಶವನ್ನು ಹಿಂದು ಸಮುದಾಯಗಳಿಗೆ ರವಾನಿಸಿದೆ. ಸುಪ್ರೀಂಕೋರ್ಟ್ ತೀರ್ಪನ್ನು ನಾವೂ ಗೌರವಿಸುತ್ತೇವೆ. ಆದರೆ ಆದೇಶದ ಪೂರ್ಣಪಾಠ ಅರ್ಥ ಮಾಡಿಕೊಳ್ಳದೆ ರಾತ್ರೋರಾತ್ರಿ ತೆರವು ಮಾಡಿರುವುದು ಸರಿಯಲ್ಲವೆಂಬ ಹಿಂದುಪರ ಸಂಘಟನೆ ಗಳ ನಿಲುವನ್ನು ಕಮಲಪಡೆ ಪರೋಕ್ಷವಾಗಿ ಪುಷ್ಠೀಕರಿಸಿದೆ.

ಪರಿವಾರ ಸಂಘಟನೆಗಳು, ಬಿಜೆಪಿ ಒತ್ತಾಸೆಗೆ ಸ್ಪಂದಿಸಬೇಕಾದ ಅನಿವಾರ್ಯತೆ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದ್ದು, ಈ ಬಿಕ್ಕಟ್ಟಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಿದೆ. ಕರೊನಾ ಮೂರನೇ ಭೀತಿಯಿರುವ ಕಾರಣ ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ, ಶಾಂತಿ ಪಾಲನೆ ಮತ್ತು ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಆರ್ಥಿಕ ವ್ಯವಸ್ಥೆ ಹಳಿ ತಪ್ಪದಂತೆ ನೋಡಿಕೊಳ್ಳುವ ಹೊಣೆ ಜಿಲ್ಲಾಡಳಿತಕ್ಕೆ ಒಪ್ಪಿಸಿ, ‘ಧಾರ್ವಿುಕ ಕೇಂದ್ರಗಳ ವಿಷಯ ಬಿಡಿ, ಸರ್ಕಾರ ನಿಭಾಯಿಸಲಿದೆ ಎಂಬ ಸೂಚನೆ ನೀಡುವ ನಿರೀಕ್ಷೆಯಿದೆ.

ಪರ್ಯಾಯ ಕ್ರಮಗಳ ಉಪೇಕ್ಷೆ

  • ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿದ ದೇವಸ್ಥಾನ ಸೇರಿದಂತೆ ಧಾರ್ವಿುಕ ಕೇಂದ್ರಗಳ ತೆರವು ವಿಚಾರ ದಲ್ಲಿ ಸುಪೀಂಕೋರ್ಟ್ ಆದೇಶವನ್ನು ಬಹುತೇಕ ಜಿಲ್ಲಾ ಆಡಳಿತಗಳು ಉಪೇಕ್ಷಿಸಿವೆ ಎಂದು ದೂರು ಕೇಳಿ ಬರುತ್ತಿವೆ
  • ಖುದ್ದು ಸ್ಥಳ ಪರಿಶೀಲಿಸಿ ಆಯಾ ಧಾರ್ವಿುಕ ಕೇಂದ್ರಗಳ ಇತಿಹಾಸ, ಮಹತ್ವದ ಕುರಿತು ಮಾಹಿತಿ ಸಂಗ್ರಹಿಸುವ ಜತೆಗೆ ಪ್ರತ್ಯೇಕವಾಗಿ ಆಯಾ ಸಮಿತಿಗಳ ಜತೆಗೆ ರ್ಚಚಿಸಬೇಕು
  • ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರಕ್ಕೆ ತೊಂದರೆಯಿಲ್ಲ ಎಂಬುದು ಖಚಿತಪಟ್ಟರೆ ಸಕ್ರಮಗೊಳಿಸಬೇಕು. ಎರಡನೆಯದಾಗಿ ಅದೇ ಜಾಗದಲ್ಲಿ ಉಳಿಸಬೇಕು ಮೂರನೇ ಅಥವಾ ಅಂತಿಮ ಕ್ರಮವಾಗಿ ಸ್ಥಳಾಂತರಿಸಬೇಕು ಎಂದು ಈ ಆದೇಶದಲ್ಲಿ ತಿಳಿಸಿದೆ.

ದೇಗುಲಗಳ ವಿಚಾರದಲ್ಲಿ ಜನರು ಹಾಗೂ ಪಕ್ಷದ ಕಾರ್ಯಕರ್ತರ ಭಾವನೆ ಅರ್ಥವಾಗಿದೆ. ಈ ವಿಷಯದಲ್ಲಿ ಕಾನೂನು ತೊಡಕಿದ್ದರೂ ಶಾಂತಿ ಕದಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಜನರು ಹಾಗೂ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವ ತೀರ್ಮಾನ ತೆಗೆದುಕೊಳ್ಳಲಾಗುವುದು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ದೇಗುಲಗಳ ತೆರವು ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ದೇವಸ್ಥಾನ ಕೆಡವಲು ಅವಕಾಶ ನೀಡುವುದಿಲ್ಲ, ಕಾನೂನು ಕ್ರಮ ತೆಗೆದುಕೊಳ್ಳ ಲಾಗುವುದು. ಅಗತ್ಯವಿದ್ದರೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗುವುದು. | ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಅಚಾತುರ್ಯದಿಂದ ಒಂದು ಘಟನೆ ನಡೆದಿದೆ. ಜನರ ಭಾವನೆಗಳನ್ನು ಗೌರವಿಸುವ ಜತೆಗೆ ಸುಪ್ರೀಂಕೋರ್ಟ್ ತೀರ್ಪನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ದೇವಸ್ಥಾನಗಳ ರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಭಾರತೀಯ ಜನತಾಪಕ್ಷ ಬಿಗಿ ನಿಲುವು ತಳೆದಿರುವುದನ್ನು ಸ್ವಾಗತಿಸುತ್ತೇವೆ. | ಕೇಶವ ಹೆಗಡೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದು ಪರಿಷತ್

ದೇಗುಲ ತೆರವಿಗೆ ಪೂರ್ಣವಿರಾಮ

ದಾವಣಗೆರೆ: ರಾಜ್ಯದಲ್ಲಿ ದೇವಾಲಯ ತೆರವು ಮಾಡುವಂಥ ಅಚಾತುರ್ಯ, ಶಾಂತಿ ಕದಡುವಂಥ ವಿಚಾರಗಳಿಗೆ ಪೂರ್ಣ ವಿರಾಮ ಹಾಕಲು ಸರ್ಕಾರ ಗಟ್ಟಿ ನಿರ್ಧಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ತ್ರಿಶೂಲ್ ಕಲಾ ಭವನದಲ್ಲಿ ಭಾನುವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದೇಗುಲ ತೆರವು ನಡೆದ ದಿನದಿಂದ ನಿರಂತರವಾಗಿ ಕಾನೂನು ಪಂಡಿತರು ಹಾಗೂ ಪಕ್ಷದ, ಸಂಘಟನೆಯ ಹಿರಿಯರೊಂದಿಗೆ ರ್ಚಚಿಸಿದ್ದೇನೆ. ಈ ವಿಚಾರವಾಗಿ ನ್ಯಾಯಾಲಯದ ಹಲವು ತೀರ್ಪಗಳಿವೆ. ಎಲ್ಲವನ್ನೂ ಗಮನಿಸಿ ಆಡಳಿತಾತ್ಮಕ ಹಾಗೂ ಕಾನೂನು ಕ್ರಮಗಳನ್ನು ಕೈಗೊಂಡು ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ತಿಳಿಸಿದರು.

ದೇಗುಲ ತೆರವಾಗಿರುವ ಪ್ರದೇಶದಲ್ಲಿ ಭಕ್ತರ ಮನಸ್ಸಿಗೆ ಆಗಿರುವ ಘಾಸಿಯನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ನಿಮ್ಮ ಭಾವನೆ, ನೋವು ಅರ್ಥವಾಗುತ್ತದೆ. ಇದು ನಿಮ್ಮದೇ ಸರ್ಕಾರ. ಕಾನೂನು ಚೌಕಟ್ಟಿನಲ್ಲಿ ಪರಿಹಾರ ಸಾಧ್ಯವಿದೆ. ಸಹನೆ ಕಾಪಾಡಿ, ಸಹಕಾರ ನೀಡಿ ಎಂದು ಮನವಿ ಮಾಡಿದರು. ನಮ್ಮ ಗಮನಕ್ಕೆ ಬರದೇ ಕೆಲವು ಅಧಿಕಾರಿಗಳು ಪರಿಣಾಮಗಳನ್ನು ಯೋಚಿಸದೆ ತೆಗೆದುಕೊಂಡ ಆತುರದ ಕ್ರಮದಿಂದ ಶಾಂತಿ ಕದಡುವ, ಮನಸ್ಸಿಗೆ ನೋವಾಗುವ ಘಟನೆಗಳು ನಡೆದಿವೆ ಎಂದು ವಿಷಾದಿಸಿದರು. ಇದು ಮೊದಲ ಘಟನೆಯೇನಲ್ಲ, ಹಿಂದೆಯೂ ಕರ್ನಾಟಕ, ಗುಜರಾತ್, ರಾಜಸ್ತಾನದಲ್ಲಿ ನಡೆದಿವೆ. ಅಂಥ ಸಂದರ್ಭಗಳಲ್ಲಿ ನಮ್ಮ ಹಿರಿಯರು ಸಮಸ್ಯೆ ಪರಿಹರಿಸಿದ್ದಾರೆ. ಅದೇ ರೀತಿಯ ರಾಜಕೀಯ ಮುತ್ಸದ್ದಿತನವನ್ನು ಪ್ರದರ್ಶಿಸುವ ಸಂದರ್ಭ ಬಂದಿದೆ ಎಂದು ಹೇಳಿದರು. ನಂಜನಗೂಡು ದೇಗುಲ ತೆರವು ಘಟನೆ, ಪಕ್ಷದ ಕಾರ್ಯಕರ್ತರ ಮೇಲೆ ವಿನಾಕಾರಣ ದೌರ್ಜನ್ಯ, ನಮ್ಮ ವಿಚಾರಧಾರೆಗೆ ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಬರುವ, ಮನಸ್ಸಿಗೆ ಘಾಸಿಯಾಗುವ ವಿಚಾರಗಳು, ನಾಡನ್ನು ಅಭದ್ರಗೊಳಿಸುವವರಿಗೆ ನೆಲೆ ಕೊಡುವ ದುಷ್ಟ ಶಕ್ತಿಗಳು, ಬೇರೆ ದೇಶಗಳಿಂದ ವಲಸೆ ಬಂದು ನಮ್ಮ ಜನರ ಹಕ್ಕುಗಳನ್ನು ಕಸಿಯುವ ಪ್ರಯತ್ನಗಳನ್ನು ಸವಾಲಾಗಿ ಸ್ವೀಕರಿಸಿದ್ದೇವೆ, ಇವುಗಳನ್ನು ಎದುರಿಸುವ ಶಕ್ತಿ ಸರ್ಕಾರಕ್ಕೆ, ಪಕ್ಷಕ್ಕೆ ಇದೆ, ಅದನ್ನು ಮಾಡಿ ತೋರಿಸುತ್ತೇವೆ ಎಂದು ತಿಳಿಸಿದರು.