ಮೈಸೂರು: ನೆಮ್ಮದಿಗಾಗಿ ಮನುಷ್ಯ ಹುಡುಕಾಟ ನಡೆಸುತ್ತಿರುವಂತೆಯೇ ದೇವಾಲಯಗಳ ಜತೆಗೆ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಕಳವಳ ವ್ಯಕ್ತಪಡಿಸಿದರು.
ನಗರದ ಶ್ರೀರಾಂಪುರ ಎರಡನೇ ಹಂತದ ದೇವಯ್ಯನಹುಂಡಿ ಮುಖ್ಯರಸ್ತೆಯಲ್ಲಿ ಶ್ರೀ ಶಾಕಂಭರಿ ಧಾರ್ಮಿಕ ಶ್ರದ್ಧಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಹಿರಿಯರನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಂತಹ ಪರಿಸ್ಥಿತಿ ಇಲ್ಲ. ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಅವರಲ್ಲಿ ಅನಾಥಪ್ರಜ್ಞೆ ಕಾಡದಂತೆ ಮಾಡಬೇಕು. ಹಿರಿಯರನ್ನು ಚೆನ್ನಾಗಿ ನೋಡಿಕೊಂಡಾಗ ಮಾತ್ರ ಆ ಸಮಾಜ ಉತ್ತಮವಾಗಿರುತ್ತದೆ ಎಂದರು.
ಶ್ರೀ ಶಾಕಂಭರಿ ಧಾರ್ಮಿಕ ಶ್ರದ್ಧಾ ಕೇಂದ್ರದ ಸಂಸ್ಥಾಪಕ ಬಿ.ಆರ್.ನಟರಾಜ ಜೋಯಿಸ್ ಮಾತನಾಡಿ, ಸಂಧ್ಯಾ ಸುರಕ್ಷಾ ಟ್ರಸ್ಟ್ ಈಗಾಗಲೇ ರಾಮಕೃಷ್ಣನಗರದ ಉದಯರವಿ ರಸ್ತೆಯಲ್ಲಿ ಒಂದು ಹಿರಿಯರ ನೆಮ್ಮದಿ ಕೇಂದ್ರ ನಡೆಸುತ್ತಿದೆ. ಇದೀಗ ಮತ್ತೊಂದು ಕೇಂದ್ರವನ್ನು ಹೊಸ ಸೌಲಭ್ಯಗಳೊಂದಿಗೆ ತೆರೆಯಲಾಗಿದೆ. ಇಲ್ಲಿ ವೃದ್ಧರ ಯೋಗಕ್ಷೇಮ ನೋಡಿಕೊಳ್ಳುವುದರ ಜತೆಗೆ ಧಾರ್ಮಿಕ ಕಾರ್ಯಗಳು, ವೇದ ಪಾಠ, ಯೋಗ, ಪ್ರವಚನ ಒಳಗೊಂಡ ತರಗತಿಗಳನ್ನು ನಡೆಸಲಾಗುವುದು ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಯ್ಯಂಗಾರ್, ಸಮಾಜ ಸೇವಕ ಕೆ.ರಘುರಾಂ ಮಾತನಾಡಿ, ಈ ಕೇಂದ್ರಕ್ಕೆ ಬೇಕಾದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಗರಪಾಲಿಕೆ ಸದಸ್ಯೆ ಗೀತಾಶ್ರೀ ಯೋಗಾನಂದ, ಮೆಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್, ಬ್ರಾಹ್ಮಣ ಧರ್ಮಸಹಾಯ ಸಭಾ ಅಧ್ಯಕ್ಷ ಎನ್. ಶ್ರೀನಿವಾಸ್, ಶಿವ ದೇವಸ್ಥಾನದ ಅಧ್ಯಕ್ಷ ಎಚ್.ಜಿ.ಪರಶಿವಮೂರ್ತಿ, ನಗರ ಬಿಜೆಪಿ ವಕ್ತಾರ ಎಂ.ಎ.ಮೋಹನ್, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಕರ್ನಾಟಕ ಸೇನಾಪಡೆ ಅಧ್ಯಕ್ಷ ತೇಜಸ್ ಲೋಕೇಶ್‌ಗೌಡ, ಎಸ್.ಎಂ.ಕೃಷ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಕ್ರಾಂತ್ ಪಿ.ದೇವೇಗೌಡ, ಎಂ.ಎಸ್.ಅನಂತಪ್ರಸಾದ್, ವೈದೇಹಿ ಇತರರು ಇದ್ದರು.