ನ್ಯೂಸ್

ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಉಡುಗೆ

  • ಗುರುಪುರ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆ ಧರಿಸಿ ಸಹಕರಿಸುವಂತೆ ಕ್ಷೇತ್ರಗಳ ವತಿಯಿಂದ ಅಧಿಕೃತವಾಗಿ ಬ್ಯಾನರ್ ಅಳವಡಿಸಲಾಗಿದೆ.

  • ನಾಲ್ಕು ದಿನದ ಹಿಂದೆ ಬಂಟ್ವಾಳದ ಹಿಂದು ಸಂಘಟನೆಯು ಪೊಳಲಿಯಲ್ಲಿ ಈ ಕುರಿತ ಸೂಚನಾ ಫಲಕ ಅಳವಡಿಸಿದ್ದರೂ, ಅದಕ್ಕೆ ಮಾನ್ಯತೆ ಇರಲಿಲ್ಲ. ಈಗ ಇಲಾಖೆ, ದೇವಸ್ಥಾನ ಆಡಳಿತ ಮಂಡಳಿ ಸಮಾಲೋಚನೆ ನಡೆಸಿದ ಬಳಿಕ ಆಡಳಿತ ಮಂಡಳಿಯೇ ಸೂಚನಾ ಫಲಕ ಹಾಕಿದೆ. ಇದರನ್ವಯ ಮಹಿಳೆಯರಿಗೆ ಸೀರೆ ಅಥವಾ ಚೂಡಿದಾರ್, ಪುರುಷರಿಗೆ ಪ್ಯಾಂಟ್, ಅಂಗಿ, ಲುಂಗಿ ಸಾಂಪ್ರದಾಯಿಕ ಉಡುಗೆ ಎಂದು ಹೆಸರಿಸಲಾಗಿದೆ. ಆದರೆ ಇಲ್ಲಿ ವಸ್ತ್ರ ಸಂಹಿತೆ ಕಡ್ಡಾಯವಲ್ಲ ಎಂದು ಪೊಳಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ ಜಯಮ್ಮ ತಿಳಿಸಿದ್ದಾರೆ.
    ಎರಡು ದಿನಗಳ ಹಿಂದೆ ಶ್ರೀ ಕಟೀಲು ದೇವಸ್ಥಾನದಲ್ಲೂ ಹಿಂದು ಸಾಂಪ್ರದಾಯಿಕ ಉಡುಗೆ ಧರಿಸುವಂತೆ ಭಕ್ತರಲ್ಲಿ ವಿನಂತಿಸಲಾದ ಅಧಿಕೃತ ಬ್ಯಾನರ್ ಅಳವಡಿಸಲಾಗಿದೆ. ಹಿಂದು ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ವಿನಂತಿಸಲಾಗಿದೆ. ಧಾರ್ಮಿಕ ಕೇಂದ್ರಗಳಿಗೆ ಅಶ್ಲೀಲ ಉಡುಗೆ ತೊಟ್ಟು ಬರುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಈ ರೀತಿ ವಿನಂತಿಸಲಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.