ತುಮಕೂರು: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ದೇವರಾಯನದುರ್ಗದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಭಾನುವಾರ ರಾತ್ರಿ ಪ್ರಹ್ಲಾದ ಉತ್ಸವ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮಗಳು ನೆರವೇರಿದವು.
ಇಂದು (ಮಾ.6) ಗರುಡ ವಾಹನೋತ್ಸವ, ಮುತ್ತಿನ ಪಲ್ಲಕ್ಕಿ, ನವಿಲು ವಾಹನೋತ್ಸವ ನಡೆಯಲಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ರಾಜ್ಯಸರ್ಕಾರದ ವತಿಯಿಂದ ಬ್ರಹ್ಮ ರಥೋತ್ಸವ ನಡೆಯಲಿದೆ. ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತುಮಕೂರಿನ ಯಕ್ಷದೀ ತಂಡದಿಂದ ಯಜ್ಞ ಸಂರಕ್ಷಣೆ ಯಕ್ಷಗಾನ ನಡೆಯಲಿದೆ. ಅಲ್ಲದೆ ಭಕ್ತಾದಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ರಾತ್ರಿ ‘ಸಂಪೂರ್ಣ ರಾಮಾಯಣ’ ನಾಟಕ ನಡೆಯಲಿದೆ.
ವೆಂಕಟೇಶ್ವರನಿಗೂ ಮನೆ ದೇವರು: ಕರಿಗಿರಿ ನರಸಿಂಹನು ತಿರುಪತಿಯ ವೆಂಕಟೇಶ್ವರ ಸ್ವಾಮಿಗೂ ಮನೆದೇವರು ಎಂಬ ನಂಬಿಕೆ ಇದೆ. ಒಮ್ಮೆ ಶ್ರೀನಿವಾಸನ ತಾಯಿ ಬಕುಳಾದೇವಿ ಸಮೇತನಾಗಿ ನರಸಿಂಹನ ದರ್ಶನಕ್ಕೆ ಬರುತ್ತಾನೆ. ಹೊಟ್ಟೆಬಾಕನಾದ ಶ್ರೀನಿವಾಸ ಹಸಿವಿನಿಂದ ಬಳಲಿ ಹೋಗಿರುತ್ತಾನೆ. ಆದರೂ ಯಾರೂ ಅನ್ನ ನೀಡುವುದಿಲ್ಲ. ಆದರೆ ಬಬ್ಬ ಬಡವ ಮಾತ್ರ ತಾಯಿ-ಮಗನಿಗೆ ಬಡಿಸುತ್ತಾನೆ. ಶ್ರೀನಿವಾಸ ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಭೂದೇವಿ ಬಾಯಿ ತೆರೆಯುತ್ತಾಳೆ. ಒಂದು ತುತ್ತನ್ನು ಅವಳಿಗೆ ನೀಡುತ್ತಾನೆ. ಎರಡನೇ ತುತ್ತು ತಿನ್ನಬೇಕು ಎನ್ನುವಷ್ಟರಲ್ಲೇ ಶ್ರೀದೇವಿ ಬಾಯಿ ತೆರೆಯುತ್ತಾಳೆ. ಮೂರನೇ ತುತ್ತನ್ನು ತಾನು ತಿಂದ ನಂತರ ತೃಪ್ತನಾದ ಶ್ರೀನಿವಾಸ ಮುಂದೆ ಈ ಊರಿನಲ್ಲಿ ಯಾರೂ ಹಸಿದವರಿಗೆ ಅನ್ನ ಹಾಕುತ್ತಾರೋ ಅವರ ಬಾಳು ಅಕ್ಷಯವಾಗಲಿ ಎಂದು ಆಶೀರ್ವದಿಸುತ್ತಾನೆ. ಆದ್ದರಿಂದಲೇ ರಥೋತ್ಸವದ ದಿನ ಜಾತಿ ಮತ ಭೇದವಿಲ್ಲದೆ ಇಲ್ಲಿ ಸಂತರ್ಪಣೆ ನಡೆಯುತ್ತದೆ. ಈಗಲೂ ಶ್ರೀನಿವಾಸನ ತಾಯಿ ಬಕುಳಾದೇವಿ ಸಮೇತ ಪ್ರತಿವರ್ಷ ಜಾತ್ರೆಗೆ ಬರುತ್ತಾನೆ ಎಂಬ ನಂಬಿಕೆ ಇದೆ. ಅವನು ಯಾವ ರೂಪದಲ್ಲಿ ಬೇಕಾದರೂ ಬರುತ್ತಾನೆ ಎಂಬ ನಂಬಿಕೆಯಿಂದ ಅಂದು ಯಾರೂ ಇಲ್ಲ ಎನ್ನದೆ ಅನ್ನದಾನ ಮಾಡುತ್ತಾರೆ.
ಐತಿಹಾಸಿಕ ಪುಣ್ಯ ಕ್ಷೇತ್ರ: ಕರಿಗಿರಿ ಕ್ಷೇತ್ರವೆಂದೇ ಪುರಾಣ ಪ್ರಸಿದ್ಧವಾಗಿರುವ ದೇವರಾಯನದುರ್ಗ, ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಿಷ್ಣು ಪುರಾಣ, ನಾರದ ಪುರಾಣಗಳಲ್ಲಿಯೂ ಕ್ಷೇತ್ರದ ಉಲ್ಲೇಖವಿದೆ. ನರಸಿಂಹನ ರೂಪವನ್ನು ಕಾಣಬೇಕೆಂದು ಬ್ರಹ್ಮದೇವರು ಕ್ಷೇತ್ರದಲ್ಲಿ 1000 ವರ್ಷ ತಪಸ್ಸನ್ನಾಚರಿಸುತ್ತಾನೆ. ಒಂದು ದಿನ ವಿಷ್ಣುವು ನರಸಿಂಹನ ಅವತಾರದಲ್ಲಿ ದರ್ಶನವೀಯುತ್ತಾನೆ. ಆದರೆ ಉಗ್ರ ಸ್ವರೂಪವನ್ನು ಕಂಡು ಬ್ರಹ್ಮ ಬೆಚ್ಚಿ ಬೀಳುತ್ತಾನೆ. ನಂತರ ಲಕ್ಷ್ಮಿದೇವಿ ತೊಡೆಯೇರಿ ಕುಳಿತಾಗ ಉಗ್ರನರಸಿಂಹ ಶಾಂತನಾಗುತ್ತಾನೆ. ಬ್ರಹ್ಮರು ತಪಸ್ಸನ್ನಾಚರಿಸಿದ ಆ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ವಿಗ್ರಹವನ್ನು ಸ್ಥಾಪಿಸುತ್ತಾರೆ. ನಂತರ ಪ್ರತಿ ವರ್ಷ ಪೂರ್ವ ಫಲ್ಗುಣಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರಗಳ ಸಂಧಿಕಾಲದಲ್ಲಿ 108 ನರಸಿಂಹ ದೇವರುಗಳ ರಥೋತ್ಸವ ನಡೆಸುವುದಾಗಿ ಸಂಕಲ್ಪಿಸುತ್ತಾರೆ. ಅಂದಿನಿಂದ ಇಲ್ಲಿ ಪುಬ್ಬಾ ನಕ್ಷತ್ರದ ದಿನ ರಥೋತ್ಸವ ನಡೆಯುತ್ತಿದೆ. ಮುಂದೆ ಅಂಬರೀಶ ಮಹಾರಾಜನ ಆಪೇಕ್ಷೆ ಮೇರೆಗೆ ದೂರ್ವಾಸ ಮುನಿಗಳು ಕೆಳಗಿನ ಬೆಟ್ಟದಲ್ಲಿರುವ ಶ್ರೀ ಭೋಗಾಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಾರೆ ಎಂಬ ಐತಿಹ್ಯವಿದೆ. ಸದ್ಯ ಇದೇ ದೇವರಿಗೆ ರಥೋತ್ಸವ ಉತ್ಸವ ಇತ್ಯಾದಿಗಳು ನಡೆಯುತ್ತವೆ. 12 ದಿನ ನಡೆಯುವ ಜಾತ್ರೆಯಲ್ಲಿ ಎಂಟನೇ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಆತಂಕದಲ್ಲೇ ರಥೋತ್ಸವ ನೆರವೇರಿತ್ತು. ಈ ವರ್ಷ ಆತಂಕ ದೂರವಾಗಿದ್ದು, ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಭಕ್ತಾದಿಗಳಿಗೆ ಸಾಧ್ಯವಾದ ಮಟ್ಟಿಗೆ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. | ಸುನೀಲ್ ಕುಮಾರ್ ದೇವಾಲಯ ಇಒ
ಮೈಸೂರು ಅರಸರ ನೆನಪು: ಕ್ಷೇತ್ರದ ಮೇಲೆ ಮುಸ್ಲಿಂ ದಾಳಿಕೋರರು ದಾಳಿ ಮಾಡಿ ಇಲ್ಲಿ ಸುಮಾರು 70 ವರ್ಷ ಯಾವುದೇ ಪೂಜೆ ಪುನಸ್ಕಾರ ಇರಲಿಲ್ಲ. 1696ರ ವೇಳೆಗೆ ಪ್ರವರ್ಧಮಾನಕ್ಕೆ ಬಂದ ಮೈಸೂರು ಅರಸ ಚಿಕ್ಕದೇವರಾಜ ಒಡೆಯರು ಮುಸ್ಲಿಂ ದಾಳಿಕೋರರನ್ನು ಇಲ್ಲಿಂದ ಓಡಿಸಿದರೆಂದು ಇತಿಹಾಸ ಹೇಳುತ್ತದೆ. ಮೈಸೂರು ಅರಸರೇ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದು, ದೇವರಿಗೆ ಬಂಗಾರದ ಆಭರಣಗಳನ್ನು ಕಾಣಿಕೆ ನೀಡಿದ್ದಾರೆ. ಜಾತ್ರೋತ್ಸವದಲ್ಲಿ ಇಂದಿಗೂ ಅದೇ ಆಭರಣಗಳನ್ನು ತೊಡಿಸಲಾಗುತ್ತದೆ. ಕಲ್ಯಾಣೋತ್ಸವ ನಿಮಿತ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು