ಬಾಳೆಹೊನ್ನೂರು: ಮುದುಗುಣಿ ಶಿವಗಂಗಾ ಮಠದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಮುದುಗುಣಿ ಬಸ್ ನಿಲ್ದಾಣ ಸಮೀಪದಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ಉದ್ಘಾಟಿಸಲಾಯಿತು.
ಮಹಾದ್ವಾರದ ದಾನಿ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪಗೌಡ (ಮರಿಗೌಡ) ದ್ವಾರ ಉದ್ಘಾಟಿಸಿ ಮಾತನಾಡಿ, ಸಿದ್ದೇಶ್ವರ ಸ್ವಾಮಿ ದೇವಾಲಯದ ಭಕ್ತರು, ಗ್ರಾಮಸ್ಥರ ಆಶಯದಂತೆ ನಮ್ಮ ಕುಟುಂಬದಿಂದ ನೂತನ ಮಹಾದ್ವಾರ ನಿರ್ಮಿಸಿಕೊಡಲಾಗಿದೆ. ಇದು ನಮ್ಮ ಕುಟುಂಬಕ್ಕೆ ಆತ್ಮತೃಪ್ತಿ ತಂದಿದೆ ಎಂದರು.
ದೇವರ ಸೇವೆ ಮಾಡುವುದರಿಂದ ಪುಣ್ಯ ಲಗಳು ದೊರೆಯಲಿವೆ. ನಮ್ಮ ಪಾಪ ಕರ್ಮಗಳು ಕಳೆದು ಒಳ್ಳೆಯ ದಿನಗಳು ಲಭ್ಯವಾಗಲಿವೆ. ಮುದುಗುಣಿಯ ಸಿದ್ದೇಶ್ವರ ಸ್ವಾಮಿ ಪುರಾತನ ದೇವಾಲಯವಾಗಿದ್ದು ಸಿದ್ದೇಶ್ವರಸ್ವಾಮಿಯ ಪವಾಡಗಳು ಹಲವಾರು ಇವೆ. ನಂಬಿದ ಭಕ್ತರಿಗೆ ಸಿದ್ದೇಶ್ವರಸ್ವಾಮಿ ಆಶಾಕಿರಣವಾಗಿದ್ದಾರೆ ಎಂದರು.
ದೇವಾಲಯ ಸಮಿತಿ ಕಾರ್ಯದರ್ಶಿ ಸಿ.ವಿ.ಸುನೀಲ್ ಮಾತನಾಡಿ, ಕೊಳಲೆಯ ಶಾರದಾ ರುದ್ರಪ್ಪ ಗೌಡ ಕುಟುಂಬದವರು ಸಿದ್ದೇಶ್ವರ ಸ್ವಾಮಿ ದೇವಾಲಯದ ಭಕ್ತರ ಆಶಯದಂತೆ 6 ಲಕ್ಷ ರೂ. ವೆಚ್ಚದಲ್ಲಿ ಸುಂದರ, ವಿಶೇಷ ಚಿತ್ತಾರವುಳ್ಳ ಸ್ವಾಗತ ಮಹಾದ್ವಾರ ನಿರ್ಮಿಸಿಕೊಟ್ಟಿದ್ದಾರೆ. ಅದರ ಸಮರ್ಪಕ ನಿರ್ವಹಣೆ ಗ್ರಾಮದ ಭಕ್ತರದ್ದಾಗಿದೆ. ದೇವಾಲಯದಲ್ಲಿ ಭಾನುವಾರದಿಂದ ವಾರ್ಷಿಕ ಸುಗ್ಗಿಹಬ್ಬದ ಕಾರ್ಯಕ್ರಮ ಚಾಲನೆಗೊಂಡಿದ್ದು ಸೋಮವಾರ ರಾತ್ರಿ 1 ಗಂಟೆಗೆ ಹಲಗೆ ವಾದ್ಯದ ಸ್ಪರ್ಧೆ, ಮಂಗಳವಾರ ಶ್ರೀ ಸ್ವಾಮಿಯ ಕೆಂಡಾರ್ಚನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಗುತ್ತಿಗೆದಾರ ಸುಧಾಕರ್, ರಂಭಾಪುರಿ ಪೀಠದ ಅರ್ಚಕರಾದ ಬಸವರಾಜ ಶಾಸಿ, ಶಿವಪ್ರಕಾಶ್ ಶಾಸಿ, ಗಿರೀಶ್ ಮಹಾದೇವಯ್ಯ, ಗ್ರಾಮದ ಪ್ರಮುಖರಾದ ಕೆ.ಆರ್.ದೀಪಕ್ ಮರಿಗೌಡ, ಕೆ.ಎನ್.ರಾಮಸ್ವಾಮಿ, ಎಂ.ಡಿ.ಶಿವರಾಮ್, ಎಂ.ಆರ್.ಜಗದೀಶ್, ಸದಾಶಿವ ಆಚಾರ್ಯ, ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಅರುಣೇಶ್, ಕೆ.ಟಿ.ಗೋವಿಂದೇಗೌಡ, ಟಿ.ಎಂ.ನಾಗೇಶ್, ಪ್ರಕಾಶ್ ಮುದುಗುಣಿ, ಅವಿನಾಶ್, ಚರಣ್, ಎ.ಆರ್.ಸುರೇಂದ್ರ, ಇಬ್ರಾಹಿಂ ಶಾಫಿ, ಸುಧೀರ್ ಮತ್ತಿತರರಿದ್ದರು.