ನ್ಯೂಸ್

ದೇವನೂರು ಬಡಾವಣೆಗೆ, ಕೆಸರೆ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡಲಿ

ಯಾವುದಾರೂ ರಸ್ತೆ ಅಥವಾ ಬಡಾವಣೆಗೆ ತಮ್ಮ ಹೆಸರು ಇಟ್ಟುಕೊಳ್ಳಬೇಕು ಎನ್ನುವ ಮನಸ್ಸಿದ್ದರೆ, ದೇವನೂರು ಬಡಾವಣೆಗೆ, ಕೆಸರೆ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡಲಿ. ಅಲ್ಲಿಯೇ ಅಲ್ಲವೇ ಅವರು ಬಹುದೊಡ್ಡ ಸಾಧನೆ ಮಾಡಿರುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಸ್ತೆಗೆ ತಮ್ಮ ಹೆಸರು ನಾಮಕರಣ ಮಾಡುವ ವಿಷಯ ವಿವಾದದ ಸ್ವರೂಪ ಪಡೆದುಕೊಂಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣಮೌನಕ್ಕೆ ಶರಣಾಗಿದ್ದಾರೆ. ರಸ್ತೆಗೆ ತಮ್ಮ ಹೆಸರಿಡಬೇಕು ಎನ್ನುವ ಆಕಾಂಕ್ಷೆ ಬಹುಶಃ ಸಿಎಂ ಅವರಿಗೆ ಇರಬಹುದು ಎಂದು ಟೀಕಿಸಿದರು.

ಈ ಸಂಬಂಧ ರಸ್ತೆಯಲ್ಲಿ ಬಿಸಿಲಿನಲ್ಲಿ ನಿಂತು ಯಾಕೆ ಪ್ರತಿಭಟನೆ ಮಾಡುತ್ತೀರಾ ಎಂದು ಬಿಜೆಪಿ ಗೆಳೆಯರಿಗೆ ಕೇಳಿದ್ದೇನೆ. ಇಲ್ಲಿ ಸಿಎಂ ಅವರೇ ಚಿತಾವಣೆ ಮಾಡುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಪ್ರಿನ್ಸೆಸ್ ರಸ್ತೆ ಬದಲಾವಣೆ ಮುನ್ನಲೆಗೆ ಬಂದಾಗಲೂ ಸಿಎಂ ಮೌನವಾಗಿದ್ದಾರೆ ಎಂದರು.

ನಾನು ಮುಖ್ಯಮಂತ್ರಿಯಾಗಿ ನಾನು ಮೈಸೂರಿಗೆ ಎಷ್ಟು ಕೊಡುಗೆ ನೀಡಿದ್ದೇನೆ? ಸಿದ್ದರಾಮಯ್ಯ ಅವರು ಡಿಸಿಎಂ ಆಗಿ, ಪ್ರತಿಪಕ್ಷ ನಾಯಕರಾಗಿ, ಎರಡು ಅವಧಿಗೆ ಸಿಎಂ ಆಗಿ ಏನು ಕೊಡುಗೆ ನೀಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

2006-2007ರಲ್ಲಿ ನಾನು ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಎಷ್ಟು ಮನೆ ಮಂಜೂರು ಮಾಡಿದ್ದೇನೆ, ಎಷ್ಟು ರಾಜಕಾಲುವೆ ಅಭಿವೃದ್ಧಿ ಮಾಡಿದ್ದೇನೆ, ಜೆ ನರ್ಮ್ ಯೋಜನೆ ಮೂಲಕ 2000 ಕೋಟಿ ರೂ.ಅನುದಾನವನ್ನು ಮೈಸೂರಿಗೆ ತಂದಿದ್ದೇನೆ. ಅದೆಲ್ಲ ಮಾಡಿದ್ದು ನಾನೇ ಎಂದು ಎಲ್ಲಾದರೂ ಹೇಳಿದ್ದೇನೆಯೇ? ಅದಕ್ಕೆ ಹಾದಿಬೀದಿಗೆ ನನ್ನ ಹೆಸರು ಇಡಿ ಎಂದು ಕೇಳಲು ಆಗುತ್ತದೆಯೇ? ನಾವೇನು ಕೆಲಸ ಮಾಡಿದ್ದೇವೆ ಎಂಬ ಆತ್ಮತೃಪ್ತಿ ಇರಬೇಕು, ಅದು ಜನರ ಹೃದಯದಲ್ಲಿರಬೇಕು ಎಂದು ಕೇಂದ್ರ ಸಚಿವರು ತೀಕ್ಷ್ಮವಾಗಿ ಹೇಳಿದರು.