ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ಆಗ್ರಹ
ಹೊಸಪೇಟೆ: ದೇವದಾಸಿ ಮಹಿಳೆಯರ ಪುನರ್ವಸತಿ ಕಾರ್ಯಕ್ರಮಗಳ ಅನುಷ್ಠಾನವನ್ನು ಖಾಸಗಿ ಸಂಸ್ಥೆಗೆ ವಹಿಸುವ ರಾಜ್ಯ ಸರ್ಕಾರದ ಚಿಂತನೆ ಖಂಡನೀಯ. ಅದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ನಿರ್ವಹಿಸಬೇಕು. ದೇವದಾಸಿ ಮಹಿಳೆಯರು, ಅವರ ಮಕ್ಕಳ ಅಭಿವೃದ್ಧಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರö್ಯ ಪೂರ್ವದಿಂದಲೂ ಅನಿಷ್ಠ ದೇವದಾಸಿ ಆಚರಣೆಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ದೇವದಾಸಿ ಪದ್ಧತಿ ಕಡಿಮೆಯಾಗಿದ್ದರೂ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಕಾರ್ಯಗಳು ನಿರೀಕ್ಷಿತವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಲಕ್ಷ ಕೋಟಿ ರೂ. ಬಂಡವಾಳ ಹೂಡುವ ಕಂಪನಿಗಳಿಗೆ ೩೦ ಸಾವಿರ ಕೋಟಿ ರೂ. ಸಬ್ಸಿಡಿ ನೀಡುತ್ತದೆ. ಲೂಟಿಕೋರರ ಉದ್ಯಮಿಗಳಿಗೂ ಯಾವುದೇ ಭದ್ರತೆಯಿಲ್ಲದೇ ಸಾವಿರಾರು ಕೋಟಿ ರೂ. ಸಾಲ ನೀಡಲಾಗುತ್ತದೆ. ಆದರೆ, ದೇವದಾಸಿ ಮಹಿಳೆಯರ ಸಾಲ ಸೌಲಭ್ಯಕ್ಕೆ ಕೇವಲ ೩೦ ಸಾವಿರ ನೀಡುವ ಸರ್ಕಾದ ಧೋರಣೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ದಲಿತರ ಜನ ಸಂಖ್ಯೆಗೆ ಅನುಗುಣವಾದ ಪ್ರತಿ ವರ್ಷ ರಾಜ್ಯ ಬಜೆಟ್‌ನಲ್ಲಿ ೩೪ ಸಾವಿರ ಕೋಟಿ ರೂ. ಮೀಸಲಿಡಲಾಗುತ್ತದೆ. ಅದರಂತೆ ರಾಜ್ಯದಲ್ಲಿರುವ ಒಂದು ಲಕ್ಷ ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಕನಿಷ್ಠ ೧೦೦೦ ಕೋಟಿ ರೂ. ತೆಗೆದಿರಿಸಬೇಕು. ಸರ್ಕಾರದ ಮಾಲೀಕತ್ವದಲ್ಲಿರುವ ಭೂಮಿಯಲ್ಲಿ ದೇವದಾಸಿ ಕುಟುಂಬಕ್ಕೆ ತಲಾ ೫ ಎಕರೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ದೇವದಾಸಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಸರ್ಕಾರದ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ, ಇತ್ತೀಚೆಗೆ ಕೆಲ ಅಧಿಕಾರಿಗಳು ದೇವದಾಸಿ ಮಹಿಳೆಯರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ದೇವದಾಸಿ ಸಮುದಾಯದಲ್ಲೇ ಮದುವೆಯಾಗುವವರಿಗೆ ವಿವಾಹ ಪ್ರೋತ್ಸಾಹ ಧನ ನೀಡುತ್ತಿಲ್ಲ ಎಂದು ದೂರಿದ ಅವರು, ದೇವದಾಸಿ ಮಹಿಳೆಯರ ಮೂರು ತಲೆಮಾರಿನ ವರೆಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಹುಲಿಗೆಮ್ಮ ಗಂಗಾವತಿ, ಉಪಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಉಪಾಧ್ಯಕ್ಷೆ ಕೆ.ನಾಗರತ್ನಮ್ಮ, ಜಂಟಿ ಕಾರ್ಯದರ್ಶಿ ಎ.ಸ್ವಾಮಿ ಉಪಸ್ಥಿತರಿದ್ದರು.