ನ್ಯೂಸ್

ದುಂದು ವೆಚ್ಚ ತಡೆಗೆ ಸರಳ ಮದುವೆ ಅಗತ್ಯ

ದುಂದು ವೆಚ್ಚ ತಪ್ಪಿಸಲು ಸರಳ ಮದುವೆಗಳು ಇಂದಿನ ಅಗತ್ಯ ಎಂದು ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರ ‘ಮಂತ್ರಮಾಂಗಲ್ಯ’ ಪರಿಕಲ್ಪನೆಯಲ್ಲಿ ವಿಜಯನಗರದ ಶ್ರೀ ವಿಠಲ ರುಕ್ಮಿಣಿ ಕನ್ವೆನ್ಸನ್ ಹಾಲ್‌ನಲ್ಲಿ ಭಾನುವಾರ ನಡೆದ ಶ್ರೀ ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ. ಮಹದೇವಶೆಟ್ಟಿ- ಎಂ.ಎಲ್.ಮಾಧವಿ ಅವರ ಪುತ್ರಿ ರಚಿತಾ.ಎಂ.ಶೆಟ್ಟಿ, ಮೈಸೂರಿನ ಕೆ.ಸಿ.ನವಿತಾ- ಮಂಚನಾಯಕ ಅವರ ಪುತ್ರ ಎಂ. ಚೇತನ್ ಅವರ ವಿವಾಹ ಮಹೋತ್ಸವದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಸುಮಾರು 60 ವರ್ಷಗಳ ಹಿಂದೆಯೇ ಕುವೆಂಪು ಅವರು ಸರಳ ವಿವಾಹಗಳ ಅಗತ್ಯವನ್ನು ಮನಗಂಡು ತಮ್ಮ ಪುತ್ರನ ವಿವಾಹವನ್ನು ಅದೇ ರೀತಿ ನೆರವೇರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸಾವಿರಾರು ಜೋಡಿ ಈ ರೀತಿ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ವಿವಾಹವಾಗುತ್ತಿದ್ದಾರೆ ಎಂದರು.

ಶ್ರೀ ಕಲಾನೀಕೇತನ ಸ್ಕೂಲ್ ಆಫ್ ಆರ್ಟ್ ಕಾರ್ಯದರ್ಶಿ ಬಾಬುರಾವ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ರುದ್ರಣ್ಣ ಹರ್ತಿಕೋಟೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಡಾ.ಎಲ್. ಶ್ರೀನಿವಾಸ, ಕರ್ನಾಟಕ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬಂದಿ ಸಂಘದ ಅಧ್ಯಕ್ಷ ಡಾ. ಬಿ.ಎಲ್.ಚವ್ಹಾಣ್, ಬೆಂಗಳೂರು ಭೂಮಿಕ ಸೋಷಿಯಲ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಲರಾಮ್ ಇತರರು ಹೊಸ ಜೋಡಿಗೆ ಶುಭ ಕೋರಿದರು.

ಮದುವೆಗೆ ಬಂದಿದ್ದ ಎಲ್ಲರಿಗೂ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಮದುವೆ ಪುಸ್ತಕವನ್ನು ತಾಂಬೂಲವಾಗಿ ವಿತರಿಸಲಾಯಿತು.