ನ್ಯೂಸ್

ದೀಪಾವಳಿ ಸಂಭ್ರಮದಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿ/ಹಲವರಿಗೆ ಸುಟ್ಟ ಗಾಯ/ವಿವೇಕ್ ನೇತ್ರಾಲಯದಲ್ಲಿ ೧೦ ಮಂದಿಗೆ ಕಣ್ಣಿನ ಚಿಕಿತ್ಸೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಬೆಳಕಿನ ಹಬ್ಬವಾದ ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ ೨೦ ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಾಗಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಧಾವಿಸಿದ್ದು, ನಗರದ ವಿವೇಕ ನೇತ್ರಾಲಯದಲ್ಲಿ ಬಾಲಕರಿಬ್ಬರ ಕಾರ್ನಿಯಾಗೆ ಗಾಯವಾಗಿದ್ದು, ಚಿಕಿತ್ಸೆ ನೀಡಿದ್ದಾಗಿ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ತಿಳಿಸಿದರು.

ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದೆ ಮತ್ತು ಸಿಡಿಸುವಾಗ ಜಾಗೃತಿ ವಹಿಸಬೇಕೆಂಬ ಅರಿವು ಜನರಲ್ಲಿ ಬಂದಿರುವ ಕಾರಣ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ, ಆಸ್ಪತ್ರೆಗೆ ಬಂದವರಲ್ಲಿ ಓರ್ವ ಯುವಕ ಸೇರಿದಂತೆ ಉಳಿದ ೮ ಮಂದಿ ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದರು.

ಈ ಕುರಿತು ಮಾಹಿತಿ ನೀಡಿದ ಅವರು, ಮುನ್ನಚ್ಚರಿಕೆ ದೃಷ್ಟಿಯಿಂದ ದಿನದ ೨೪ ಗಂಟೆಗಳು ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪೂರ್ಣ ದೃಷ್ಟಿಹಾನಿಯಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಪಟಾಕಿಗಿಂತ ಅದರಿಂದ ಸಿಡಿಯುವ ಮಣ್ಣು ಮಿಶ್ರಿತ ರಸಾಯನಿಕದಿಂದಲೂ ಹಾನಿಯಾಗಿದೆ ಎಂದರು.

ಹಿAದಿನ ವರ್ಷಗಳಿಗಿಂತ ಈ ಬಾರಿ ಪಟಾಕಿ ಸಿಡಿತದಿಂದಾಗಿ ಚಿಕಿತ್ಸೆಗೆ ಬಂದವರ ಸಂಖ್ಯೆ ಬಹಳಷ್ಟು ಕುಸಿತವಾಗಿದ್ದು, ಜನರಲ್ಲಿ ಜಾಗೃತಿ ಮೂಡಿರುವುದು ಮತ್ತು ಪರಿಸರ ಕಾಳಜಿಯಿಂದ ಹಸಿರು ಪಟಾಕಿ ಮಾತ್ರ ಸಿಡಿಸಲು ಮುಂದಾಗಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಸುಟ್ಟ ಗಾಯಗಳಿಗೆ ಆಯುರ್ವೇದ ಚಿಕಿತ್ಸೆ :

ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಯ್ಯಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಯಲಯಕ್ಕೆ ಕಾದ ಎಣ್ಣೆಯಿಂದ ಮೊಣಕಾಲು, ಮೊಣಕೈ ಸುಟ್ಟಹಾಗೂ ಸಣ್ಣಪುಟ್ಟ ಗಾಯಾಳುಗಳು ೨೫ಕ್ಕೂ ಹೆಚ್ಚು ಮಂದಿ ಬಂದು ಚಿಕಿತ್ಸೆ ಪಡೆದಿದ್ದಾರೆ. ಪಾರಂಪರಿಕ ವೈದ್ಯ ವಿ.ಮಂಜುನಾಥ್ ಹೇಳುವಂತೆ ಈ ಬಾರಿ ಅನಾಹುತಗಳ ಸಂಖ್ಯೆ ಕಡಿಮೆಯಾಗಿದೆ, ಜನರಲ್ಲಿ ಅರಿವು ಬಂದಿದೆ ಎಂದರು.

ಪ್ರತಿವರ್ಷ ಅಡುಗೆ ಎಣ್ಣೆ, ಪಟಾಕಿ ಬೆಂಕಿಯ ಸುಟ್ಟ ಗಾಯಗಳ ೨೫ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಾರಿ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿ, ಜನತೆಯಲ್ಲಿ ಮತ್ತಷ್ಟು ಅರಿವು ಮೂಡಲಿ ಎಂದು ಆಶಿಸಿದರು.

ಎಸ್‌ಎನ್‌ಆರ್ ಆಸ್ಪತ್ರೆ ಒಂದು ಪ್ರಕರಣ :

ಜಿಲ್ಲಾಸ್ಪತ್ರೆಯಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿರುವ ಒಂದೆರಡು ಪ್ರಕರಣ ವರದಿಯಾಗಿದ್ದು, ಕಣ್ಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಉಳಿದಂತೆ ಶಂಕರ್ ಕಣ್ಣಿನ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ, ಜಿಇಎಫ್ ರೋಟರಿ ಕಣ್ಣಾಸ್ಪತ್ರೆ ಮತ್ತಿತರರೆಡೆ ಪಟಾಕಿ ಅನಾಹುತದಿಂದ ಚಿಕಿತ್ಸೆಗೆ ಬಂದವರ ಸಂಖ್ಯೆ ಕಡಿಮೆಯಿದ್ದು, ಒಟ್ಟಾರೆ ಜನರಲ್ಲಿ ಅರಿವು ಮೂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಚಿತ್ರ ೦೩ ಕೆ.ಎಲ್.ಆರ್. ೦೩ : ಕೋಲಾರದ ವಿವೇಕ ನೇತ್ರಾಲಯದಲ್ಲಿ ಪಟಾಕಿ ಸಿಡಿತರಿಂದ ಕಣ್ಣಿನ ಕಾರ್ನಿಯಾಗೆ ಗಾಯವಾಗಿರುವ ಬಾಲಕನೊಬ್ಬನಿಗೆ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ಚಿಕಿತ್ಸೆ ನೀಡುತ್ತಿರುವುದು.