ಬೆಟ್ಟದಪುರದದಲ್ಲಿ ಬುಧವಾರ ದೀಪಾವಳಿ ಅಂಗವಾಗಿ ಮಲ್ಲಿಕಾರ್ಜುನ ಸ್ವಾಮಿ ದೀವಟಿಗೆ ಉತ್ಸವ ಜರುಗಿತು. 
ನ್ಯೂಸ್

ದೀಪಾವಳಿ ದೀವಟಿಗೆ ಉತ್ಸವ ಸಂಪನ್ನ

ಬೆಟ್ಟದಪುರ: ಬೆಟ್ಟದಪುರ ಐತಿಹಾಸಿಕ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಪನ್ನಗೊಂಡಿತು.

ಎರಡು ವರ್ಷಗಳಿಂದ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ದೀವಟಿಗೆ ಉತ್ಸವವನ್ನು ದೇವಸ್ಥಾನದ ಆವರಣದಲ್ಲಿ ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲು ತಾಲೂಕು ಆಡಳಿತ ತೀರ್ಮಾನಿಸಿ ಸಿದ್ಧತೆಗಳನ್ನು ಮಾಡಿತ್ತು.

ಗ್ರಾಮದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಬೆಳ್ಳಿ ಬಸಪ್ಪ, ಗಣಪತಿ ಮತ್ತು ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳನ್ನು ಮಂಗಳವಾರ ರಾತ್ರಿ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇಡಲಾಗಿತ್ತು. ಬುಧವಾರ ಬೆಳಗ್ಗೆ ಬೆಟ್ಟದ ದೇವಸ್ಥಾನದಲ್ಲಿ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಕೈಂಕರ್ಯಗಳು ನಡೆಯಿತು. ನಂತರ ಉತ್ಸವ ಮೂರ್ತಿಗಳ ಪಂಜಿನ ಮೆರವಣಿಗೆಯು ಬೆಟ್ಟದಪುರ, ಬೆಟ್ಟದತುಂಗ, ಹರದೂರು, ಡಿ.ಜಿ. ಕೊಪ್ಪಲು, ಬಾರಸೇ, ಕುಡುಕೂರು, ಕೂರಗಲ್ಲು ಸೇರಿದಂತೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಗ್ರಾಮದಿಂದ ಗ್ರಾಮಕ್ಕೆ ಮೆರವಣಿಗೆ ಸಾಗಿದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಭಕ್ತರು ಉಘೇ ಬಸವೇಶ್ವರ, ಉಘೇ ಮಾದಪ್ಪ, ಉಘೇ ಮಲ್ಲಯ್ಯ, ಉಘೇ ಮಲ್ಲಿಕಾರ್ಜುನ, ಉಘೇ ಗಿರಿಜಾದೇವಿ ಎಂಬ ಘೋಷಣೆಗಳನ್ನು ಕೂಗಿದರು. ಬೆಟ್ಟದತುಂಗ ಹಾಗೂ ಕುಡುಕೂರು ಗ್ರಾಮಗಳಲ್ಲಿ ದೀವಟಿಗೆ ಉತ್ಸವದ ಹಿನ್ನೆಲೆ ವಿಶೇಷ ಜಾತ್ರೆಯ ಸಂಭ್ರಮ ಮನೆಮಾಡಿತ್ತು. ಗ್ರಾಮಗಳ ದೇವಸ್ಥಾನದ ಸುತ್ತ ಪಂಜಿನ ಪ್ರದಕ್ಷಿಣೆ ಹಾಕಲಾಯಿತು. ಕತ್ತಲೆ ವೇಳೆ ಪಂಜಿನ ಮೆರವಣಿಗೆ ನೋಡಿ ಭಕ್ತರು ಪುನೀತರಾದರು. ಮೆರವಣಿಗೆ ಬಳಿಕ ಮೂಲ ಸ್ಥಾನವಾದ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಉತ್ಸವ ಮೂರ್ತಿಗಳನ್ನು ವಿಧಿವಿಧಾನಗೊಂದಿಗೆ ತಂದು ಇರಿಸಲಾಯಿತು.

ಬೆಟ್ಟದಪುರದದಲ್ಲಿ ಬುಧವಾರ ದೀಪಾವಳಿ ಅಂಗವಾಗಿ ಮಲ್ಲಿಕಾರ್ಜುನ ಸ್ವಾಮಿ ದೀವಟಿಗೆ ಉತ್ಸವ ಜರುಗಿತು.

ಹರಿದು ಬಂದ ಭಕ್ತಸಾಗರ: ಸುಮಾರು 3108 ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಮಂಗಳವಾರ ಮತ್ತು ಬುಧವಾರ ಸಾವಿರಾರು ಭಕ್ತರು ಏರಿ ಸ್ವಾಮಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಹಾಗೂ ಮಂಗಳೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ದೇವರ ದರ್ಶನ ಪಡೆದರು. ಬಲಿಪಾಡ್ಯಮಿ ದಿನ ಜನರ ನೂಕುನುಗ್ಗಲು ಉಂಟಾಯಿತು. ಬೆಟ್ಟಕ್ಕೆ ಹತ್ತುವವರು ಹಾಗೂ ಇಳಿಯುವವರಿಗೆ ಸರಿಯಾದ ಮಾರ್ಗ ಸಿಗದೆ ಸಾಕಷ್ಟು ತೊಂದರೆ ಆಯಿತು. ಬೆಟ್ಟದ ದೊಡ್ಡ ಕಲ್ಲು ಬಂಡೆಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದವರನ್ನು ಪೊಲೀಸರು ಚದುರಿಸಿದರು.

ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಆರ್.ಪ್ರಕಾಶ್ ಹಾಗೂ ವೈದ್ಯಾಧಿಕಾರಿ ಡಾ.ಪೂಜಾ ನೇತೃತ್ವ ವಹಿಸಿದ್ದರು. ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಎಂ.ಎತ್ತಿನಮನಿ ಬಿಗಿ ಬಂದೋಬಸ್ತ್ ನಿಯೋಜಿಸಿದ್ದರು.