ತರೀಕೆರೆ:ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಮೂರು ದಿನಗಳ ಕಾಲ ಪಾಳೇಗಾರ ಸರ್ಜಾ ಹನುಮಪ್ಪ ನಾಯಕ ಸ್ಮರಣಾರ್ಥ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಹಾಗೂ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಗೆ ಭಾನುವಾರ ರಾತ್ರಿ 11.30ರ ಹೊತ್ತಿಗೆ ತೆರೆಬಿದ್ದಿತ್ತು.
ಬಯಲು ರಂಗ ಮಂದಿರ ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಗ್ಯಾಲರಿಯಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಕುತೂಹಲಕ್ಕೆ ಸಾಕ್ಷಿಯಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಪಂದ್ಯಾವಳಿಯ ಅಂತಿಮ ಕಾದಾಟದಲ್ಲಿ ಕೆಮಣ್ಣಿನಿಂದ ಸಿದ್ದಪಡಿಸಿದ್ದ ಅಖಾಡದಲ್ಲಿ ದಾವಣಗೆರೆಯ ಪೈಲ್ವಾನ್ ಗಿರೀಶ್ ಪುರಸಭೆ ಪ್ರಾಯೋಜಿಸಿದ 2 ಕೆ.ಜಿ ತೂಕದ ಬೆಳ್ಳಿಗದೆ ಜಯಿಸಿ ಗೆಲುವಿನ ನಗೆ ಬೀರಿದರು.
ದಾವಣಗೆರೆಯ ಕುಸ್ತಿಪಟು ಗಿರೀಶ್ ಹಾಗೂ ಬೆಳಗಾವಿಯ ಜಟ್ಟಿ ರುದ್ರಪ್ಪ ನಡುವೆ ತೀವ್ರ ಸೆಣಸಾಟ ನಡೆದರೂ ಕೊನೆಯದಾಗಿ ದಾವಣಗೆರೆ ಗಿರೀಶ್ ಹಾಕಿದ ಪಟ್ಟುಗಳು ಬೆಳಗಾವಿಯ ಕುಸ್ತಿಪಟು ರುದ್ರಪ್ಪ ಪರಾಭವಗೊಳ್ಳುವಂತೆ ಮಾಡಿತು. ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ಅಂತಿಮ ದಿನವಾದ ಭಾನುವಾರದಂದು ಬೆಳಗಾವಿ, ಕಲುಬುರ್ಗಿ, ಬೀದರ್, ಹಾವೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಹೊಳೆಹೊನ್ನೂರು, ರಾಣಿಬೆನ್ನೂರು, ದಾವಣಗೆರೆ, ಶಿಕಾರಿಪುರ, ವಿಜಯಪುರ, ಭದ್ರಾವತಿ, ತರೀಕೆರೆ ಮಾತ್ರವಲ್ಲದೆ, ದೆಹಲಿ, ಪಂಜಾಬ್, ಮಹಾರಾಷ್ಟ್ರ, ಸೊಲ್ಲಾಪುರ, ಸಾಂಗ್ಲಿ, ಕೋಲ್ಲಾ ಪುರ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದಲೂ ಕುಸ್ತಿ ಪಟುಗಳು ಆಗಮಿಸಿದ್ದರು.