ಕಡೂರು: ಉದ್ಯಮಿಗಳು ದಾನದ ರೂಪದಲ್ಲಿ ನೆರವು ನೀಡಿದರೆ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ, ಅನುದಾನ ನೀಡಿದರೂ ಉದ್ಯಮಿಗಳು, ಉಳ್ಳವರು ಶಾಲಾ ಕಾಲೇಜುಗಳಿಗೆ ಬೇಕಾಗಿರುವ ಶೈಕ್ಷಣಿಕ ಬೆಳವಣಿಗೆಯ ಪರಿಕರಗಳನ್ನು ದಾನವಾಗಿ ನೀಡಿದರೆ ಸಹಕಾರಿಯಾಗುತ್ತದೆ ಎಂದರು.
ಅಂತಿಮ ಪಿಯುಸಿ ವ್ಯಾಸಂಗ ಭವಿಷ್ಯವನ್ನು ನಿರ್ಧರಿಸುವ ಕಾಲ. ಮೊಬೈಲ್, ಟಿವಿಯಿಂದ ದೂರವಿದ್ದು ಹೆಚ್ಚಿನ ಸಮಯವನ್ನು ಕಲಿಕೆಗೆ ಮೀಸಲಿಟ್ಟರೆ ಸಾಧನೆ ಮಾಡಲು ಸಾಧ್ಯ ಎಂದರು. ಈಗಾಗಲೇ ಈ ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಗಣನೀಯ ಹೆಚ್ಚಾಗಿದ್ದು 500ರ‌್ಕ ಗಡಿದಾಟಿರುವ ಬಾಲಕಿಯರ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸುವ ಆಲೋಚನೆ ಇದೆ ಎಂದು ತಿಳಿಸಿದರು.
ಪ್ರಾಚಾರ್ಯ ಜಿ.ಪಿ.ಶಾಂತಕುಮಾರ್ ಮಾತನಾಡಿ, ಶಾಸಕರು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದಾನಿ ರಾಘವೇಂದ್ರ ಅವರು ನೀಟ್, ಸಿಇಟಿ ಪರೀಕ್ಷೆ ತಯಾರಿಗೆ ಸ್ಮಾರ್ಟ್ ಕ್ಲಾಸ್ ನಡೆಸಲು ಪ್ರೊಜೆಕ್ಟರ್ ನೀಡಿರುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರುದ್ರೇಗೌಡ, ಪುರಸಭಾ ಸದಸ್ಯ ಶ್ರೀಕಾಂತ್, ದಾನಿ ರಾಘವೇಂದ್ರ, ನಿವೃತ್ತ ಪ್ರಾಧ್ಯಾಪಕ ಎಚ್.ಎಂ.ಮಲ್ಲಿಕಾರ್ಜುನ್, ಪ್ರಾಧ್ಯಾಪಕ ಹನುಮಂತಪ್ಪ, ಜ್ಞಾನೇಶ್, ಶ್ರೀನಿವಾಸ್, ಮುಖ್ಯ ಶಿಕ್ಷಕ ಸುರೇಶ್ ಹಾಗೂ ಸಿಬ್ಬಂದಿ ಇದ್ದರು.