ಆಲ್ದೂರು: ಲೇಬರ್ ಕಂಟ್ರಾಕ್ಟರ್‌ಗಳು ಕಾಫಿ ತೋಟಗಳಿಗೆ ಕೆಲಸಕ್ಕೆ ಬಿಟ್ಟು ಹೋಗು ವಲಸೆ ಕಾರ್ಮಿಕರ ಬಳಿ ದಾಖಲೆಗಳು ಇರುವುದಿಲ್ಲ. ತೋಟದ ಮಾಲೀಕರು ಇವರ ಪೂರ್ಣ ದಾಖಲೆ ಪಡೆದು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಕಾಫಿ ಬೆಳೆಗಾರರಿಗೆ ಸೂಚಿಸಿದರು.
ಪಟ್ಟಣದಲ್ಲಿ ಶನಿವಾರ ಅಸ್ಸಾಂ ಕಾರ್ಮಿಕರಿಗೆ ಸಂಬಂಧಿಸಿದಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಕೆಲಸಕ್ಕೆ ಕಾರ್ಮಿಕರನ್ನು ಬಿಡುವ ಮೇಸಿಗಳು ಪೊಲೀಸ್ ಠಾಣೆಯಲ್ಲಿ ಪೂರ್ಣ ಮಾಹಿತಿ ನೀಡಿದ ನಂತರ ತೋಟಗಳಿಗೆ ಕಾರ್ಮಿಕರನ್ನು ಬಿಡುವ ವ್ಯವಸ್ಥೆ ಮಾಡಬೇಕು. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಕಾಫಿ ಬೆಳೆಗಾರ ಬಿ.ಎಸ್.ರಾಜೀವ್ ಮಾತನಾಡಿ, ವಲಸೆ ಕಾರ್ಮಿಕರ ಅಕ್ರಮ ಒಳ ನುಸುಳುವಿಕೆ ಹಾಗೂ ಅಪರಾಧ ಕೃತ್ಯಗಳಿಂದ ಪ್ರಾಮಾಣಿಕ ಕಾರ್ಮಿಕರನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಫಿ ಬೆಳೆಗಾರ ತೌಸ್ೀ ಆಲಿ ಮಾತನಾಡಿ, ದಿನದಿಂದ ದಿನಕ್ಕೆ ಅಸ್ಸಾಂ ಕಾರ್ಮಿಕರೇ ಹೆಚ್ಚಾಗುತ್ತಿದ್ದು ಮಲೆನಾಡಿನ ಬಹುತೇಕ ಕಾಫಿ ತೋಟಗಳಲ್ಲಿ ಅಸ್ಸಾಂ ಕಾರ್ಮಿಕರೇ ಕಂಡು ಬರುತ್ತಿದ್ದಾರೆ. ಇವರಲ್ಲಿ ಕೆಲವು ಕಾರ್ಮಿಕರು ಬೆಳೆಗಾರರಿಂದ ಮುಂಗಡ ಹಣ ಪಡೆದು ತಲೆಮರೆಸಿಕೊಳ್ಳುತ್ತಿದ್ದಾರೆ. ಬಹುತೇಕ ಒಂದೇ ರೀತಿ ಮುಖ ಹೋಲಿಕೆ ಇದ್ದು ಇವರನ್ನು ಕಂಡು ಹಿಡಿಯುವುದು ಬೆಳೆಗಾರರಿಗೆ ತಲೆನೋವಾಗಿದೆ ಎಂದರು. ಕಾರ್ಯದರ್ಶಿ ಲವ, ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್, ಮಲ್ಲೇಶ್ ಮುಂತಾದವರಿದ್ದರು.