ನ್ಯೂಸ್

ದುಶ್ಚಟಗಳಿಂದ ಅಪರಾಧ ಪ್ರಕರಣ ಹೆಚ್ಚಳ

ಬೆಟ್ಟದಪುರ: ದುಶ್ಚಟಗಳಿಂದಲೇ ಸಮಾಜದಲ್ಲಿ ಕಳ್ಳತನ, ಕೊಲೆ, ಸುಲಿಗೆ, ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಪಿರಿಯಾಪಟ್ಟಣ ರೋಟರಿ ಮಿಡ್‌ಟೌನ್ ಸಂಸ್ಥೆಯ ಅಧ್ಯಕ್ಷ ಎಂ.ಎಂ.ರಾಜೇಗೌಡ ಹೇಳಿದರು.

ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಮಿಡ್‌ಟೌನ್ ಹಾಗೂ ಆರೋಗ್ಯ ಇಲಾಖೆವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದುಶ್ಚಟಗಳಿಗೆ ಬಲಿಯಾಗದೆ ನೆಮ್ಮದಿಯ ಬದುಕು ಕಂಡುಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಆರ್. ಪ್ರಕಾಶ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಪೋಲೀಯೋ ಹನಿಯನ್ನು ಪೂರೈಕೆ ಮಾಡುವ ಉತ್ತಮ ಕೆಲಸವನ್ನು ದೇಶದೆಲ್ಲೆಡೆ ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಮಾದಕ ವ್ಯಸನದಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ವ್ಯಸನಿಗಳು ದೃಢ ಸಂಕಲ್ಪ ಮಾಡಿ ಉತ್ತಮ ಜೀವನ ನಡೆಸಬೇಕು ಎಂದರು.

ಬೆಟ್ಟದಪುರ ಕೃಷ್ಣ ಆಸ್ಪತ್ರೆಯ ವೈದ್ಯ ಡಾ.ಮೋಹನಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಲತಾ, ರೋಟರಿ ಮಿಡ್‌ಟೌನ್‌ನ ಕಾರ್ಯದರ್ಶಿ ಐಕೆಪಿ ಹೆಗ್ಗಡೆ, ಜಂಟಿ ಕಾರ್ಯದರ್ಶಿ ರಾಜು, ಸದಸ್ಯ ಲೋಕಪಾಲಯ್ಯ, ಈಶ್ವರ್, ಹರೀಶ್‌ಗೌಡ, ಆರೋಗ್ಯ ನಿರೀಕ್ಷಕ ಮುಜೀಬ್, ಮುಖ್ಯಶಿಕ್ಷಕ ಆನಂದ, ಸಹಶಿಕ್ಷಕ ಧರ್ಮಪ್ಪ, ಸಂತೋಷ್, ದೀಪಿಕಾ, ಸೋಮಣ್ಣ, ವಿಜಯ್ ಇತರರು ಇದ್ದರು.