ಕೋಲಾರ: ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ, ಜಾನಪದ ಕಲಾತಂಡಗಳ ಪ್ರದರ್ಶನ, ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಯುವಕರ ಬೈಕ್ ರ್ಯಾಲಿ, ಜೆಸಿಬಿಗಳಲ್ಲಿ ಹೂವಿನ ಸುರಿಮಳೆ...ಇದು ಜೆಡಿಎಸ್ ಪಂಚರತ್ನ ರಥಯಾತ್ರೆಯ ನಾಲ್ಕನೇ ದಿನವಾದ ಸೋಮವಾರ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಂಡು ಬಂದ ದೃಶ್ಯಗಳು.
ಚುನಾವಣೆ ಪ್ರಚಾರದಲ್ಲಿ ಇದೆಲ್ಲ ಮಾಮೂಲಿ ಎನ್ನಬಹುದಾದರೂ, ಸಾರ್ವಜನಿಕರು, ರೈತರು, ಮಹಿಳೆಯರು ಕುಮಾರಸ್ವಾಮಿ ಅವರ ಬಗ್ಗೆ ಈ ಪರಿ ಅಭಿಮಾನ ಮೆರೆದಿದ್ದು ಇದು ಮೊದಲೆನ್ನಬಹುದು. ಬೆಳಗ್ಗೆಯಿಂದ ಗಂಟೆಗಟ್ಟಲೆ ರಸ್ತೆ, ಮಹಡಿಗಳ ಮೇಲೆ ಕಾದು ನಿಂತಿದ್ದ ಸಹಸ್ರಾರು ಜನ ಅಭಿಮಾನ ಮೆರೆದರು. ತಮ್ಮ ನೆಚ್ಚಿನ ನಾಯಕ ಮನೆ ಬಳಿ ಬಂದಾಗ ಅದೆಷ್ಟೋ ಜನ ಸೆಲ್ಫಿಗಳನ್ನು ತೆಗೆದು ಸಂಭ್ರಮಿಸಿದರೆ, ಹಲವೆಡೆ ನೋಡಲು, ಹಸ್ತಲಾಘವ ಮಾಡಲು ಮುಗಿಬಿದ್ದರು. ಮಾಲೂರು ಮತ್ತು ಟೇಕಲ್ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು.
ರೋಡ್ ಶೋ: ಮಾಲೂರು ಕ್ಷೇತ್ರದ ಶಿಲ್ಪಕಲಾ ಗ್ರಾಮ ಶಿವಾರಪಟ್ಟಣದಲ್ಲಿ ಭಾನುವಾರ ರಾತ್ರಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ರಥಯಾತ್ರೆ ಮುಂದುವರಿಸಿದರು. ಮೊದಲು ಗ್ರಾಮದ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹುಂಗೇನಹಳ್ಳಿಗೆ ಆಗಮಿಸಿದರು. ರೈತರ ಸಮಸ್ಯೆ ಆಲಿಸಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಹಸ್ತಲಾಘವ ಮಾಡಿ ಕಷ್ಟ ಆಲಿಸಿದರು. ಬಳಿಕ ಮಾಜಿ ಶಾಸಕ ದಿ.ಎಚ್.ಬಿ. ದ್ಯಾವಿರಪ್ಪನವರ ಸಮಾಧಿಗೆ ನಮನ ಸಲ್ಲಿಸಿ ಅಗ್ರಹಾರ ಹೊಸಹಳ್ಳಿ ಗೇಟ್ನಲ್ಲಿ ರೋಡ್ಶೋ ನಡೆಸಿದರು.
ಅಲ್ಲಿಂದ ಯಾತ್ರೆ ಮಾಲೂರು- ಕೋಲಾರ ಕ್ಷೇತ್ರದ ಗಡಿ ಗ್ರಾಮ ತಿರುಮಲಕೊಪ್ಪ, ಗಂಗಾಪುರ, ಮೈಲಾಂಡಹಳ್ಳಿ ಗೇಟ್ ತಲುಪಿದ್ದು, ಜೆಸಿಬಿಗಳಲ್ಲಿ ಹೂಗಳನ್ನು ಎರಚಲಾಯಿತು. ಬೃಹತ್ ಸೇಬಿನ ಹಾರ ಹಾಕಿ ಕೋಲಾರ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಜೆಡಿಎಸ್, ಎಚ್ಡಿಕೆ, ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪರ ಕಾರ್ಯಕರ್ತರು ಜಯಘೋಷ ಕೂಗಿದರು. ಅಲ್ಲಿಂದ ರೋಡ್ಶೋನಲ್ಲಿ ಮೆರವಣಿಗೆ ವಕ್ಕಲೇರಿ ತಲುಪಿತು.
ವಕ್ಕಲೇರಿ ಡೇರಿ ಸಭಾಭವನ ಉದ್ಘಾಟನೆ
ವಕ್ಕಲೇರಿಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮಾತನಾಡಿ, ನಂತರ ವಕ್ಕಲೇರಿ ಹಾಲು ಉತ್ಪಾದಕರ ಸಹಕಾರ ಸಂಘದ 35 ಲಕ್ಷ ರೂ.ವೆಚ್ಚದ ನೂತನ ಸಭಾಭವನ ಉದ್ಘಾಟಿಸಿದರು.
ಜಿಲ್ಲೆಯ ಜೀವನಾಡಿ ಹೈನುಗಾರಿಕೆಯಾಗಿದ್ದು, ಕಷ್ಟದಲ್ಲಿರುವ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಬರಬೇಕಿದೆ ಎಂದು ಎಚ್ಡಿಕೆ ಹೇಳಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ ಶಕ್ತಿ ತುಂಬಲಾಗುತ್ತದೆ ಎಂದರು.
ನಂತರ ರಥಯಾತ್ರೆ ಸೋಮೇನಹಳ್ಳಿ, ಚಿನ್ನಾಪುರ, ಶೆಟ್ಟಿಗಾನಹಳ್ಳಿ, ದಂಡಿಗನಹಳ್ಳಿ, ಮುದುವತ್ತಿ, ಕೋರಗೊಂಡಹಳ್ಳಿ ತಲುಪಿತು. ಗ್ರಾಮದಲ್ಲಿ ರೋಡ್ಶೋ ಬಳಿಕ ಕಾಶಿವಿಶ್ವೇಶ್ವರ ಸ್ವಾಮಿ ದೇಗುಲದಲ್ಲಿ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು. ಬಿಗ್ಲಿ ಹೊಸಹಳ್ಳಿಯಲ್ಲಿ ರಸ್ತೆಬದಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಛತ್ರಕೋಡಿಹಳ್ಳಿಯಲ್ಲಿ ಸಹಸ್ರಾರು ಮಂದಿ ನೆರೆದಿದ್ದರು. ಗ್ರಾಮದ ಎಕ್ಸ್ಲೆಂಟ್ ಕಾಲೇಜು, ಕಾಡುಗುರು ಕಾಲೇಜಿನ ಮಕ್ಕಳು, ಸಿಬ್ಬಂದಿ, ಆಡಳಿತ ಮಂಡಳಿ ಉಪಸ್ಥಿತರಿದ್ದು ಆರತಿ ಬೆಳಗಿ ಯಾತ್ರೆಯನ್ನು ಬೀಳ್ಕೊಟ್ಟರು.
ಅಲ್ಲಿಂದ ಕೋಲಾರದ ಟೇಕಲ್ ಕ್ರಾಸ್ನಲ್ಲಿ ಯುವಕರು ಹೂಮಳೆಗರೆದು, ಸೇಬಿನ ಹಾರ ಹಾಕಿದರು. ಅಂಡರ್ಪಾಸ್ನಲ್ಲಿ ತೆರಳುತ್ತಿದ್ದ ಕುಮಾರಸ್ವಾಮಿ ಅವರನ್ನು ನೋಡಲು ಬೆಂಗಳೂರು & ಚೆನ್ನೈ ರಾಷ್ಟ್ರೀಯ ಹೆದ್ದಾರಿ ಮೇಲೆ ಜನ ಜಮಾಯಿಸಿದ್ದರು. ಬಳಿಕ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅರಹಳ್ಳಿ, ತಲಗುಂದ, ಚಲ್ಲಹಳ್ಳಿ, ನುಗ್ಗಲಾಪುರ, ಪೆಮ್ಮಶೆಟ್ಟಿಹಳ್ಳಿ, ಸೂಲೂರು, ಚೊಕ್ಕಾಪುರ, ಕೆಂದಟ್ಟಿಯಲ್ಲಿ ರೋಡ್ಶೋ, ಸಭೆಗಳನ್ನು ನಡೆಸಿದರು. ರಾತ್ರಿ ನರಸಾಪುರ, ವೇಮಗಲ್ನಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಎಚ್ಡಿಕೆ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷೆ ಹಾಗೂ ವಕ್ಕಲೇರಿ ಡೇರಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ, ಎಂಎಲ್ಸಿ ಇಂಚರ ಗೋವಿಂದರಾಜು, ಮುಖಂಡರಾದ ಸಿಎಂಆರ್ ಶ್ರೀನಾಥ್, ವಕ್ಕಲೇರಿ ವಿ.ಇ.ರಾಮಚಂದ್ರ, ಕುರ್ಕಿ ರಾಜೇಶ್ವರಿ, ಪಾಲಾಕ್ಷಗೌಡ, ಬಂಡಿ ವೆಂಕಟೇಶಪ್ಪ, ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ನಾಗಪ್ಪ, ರಾಮಾಂಜಿನಪ್ಪ, ಸಮೀರ್, ಕಾರ್ಯದರ್ಶಿ ನಾಗರಾಜ್ ಇತರರು ಇದ್ದರು.
ಒಕ್ಕಲುತನ ಮಾಡುವವರಿಗೆ ಕೊಡ್ತಿಲ್ಲ ಹೆಣ್ಣು!
ಕೋಲಾರ: ಜಿಲ್ಲೆಯಲ್ಲಿ ಒಕ್ಕಲುತನ ಮಾಡಿ ಬದುಕು ಕಟ್ಟಿಕೊಂಡಿರುವ ರೈತ ಮಕ್ಕಳಿಗೆ ಮದುವೆಗೆ ಹೆಣ್ಣುಕೊಡಲು ಯಾರೂ ಮುಂದೆ ಬರುತ್ತಿಲ್ಲ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಯುವತಿಯರು ಬೇರೆ ಜಿಲ್ಲೆಗಳ ಯುವಕರನ್ನು ವರಿಸುವುದನ್ನು ನಿಷೇಧಿಸಬೇಕು ಎಂದು ಜೆಡಿಎಸ್ ಪಂಚರತ್ನ ಯಾತ್ರೆ ವೇಳೆ ತಾಲೂಕಿನ ಮುದುವತ್ತಿ ಗ್ರಾಮದ ಯುವಕ ಧನಂಜಯ ಪತ್ರದ ಮೂಲಕ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ 20 ವರ್ಷದ ಹಿಂದೆ ಯುವತಿಯರ ಕೊರತೆ ಇರಲಿಲ್ಲ. ಆದರೀಗ ಯಾವುದೇ ಯುವತಿಯು ಬೆಂಗಳೂರಿನಲ್ಲಿ ವಾಸವಿದ್ದು, ಸರ್ಕಾರಿ ಉದ್ಯೋಗ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಕೃಷಿ ಮಾಡುತ್ತಿರುವ ಯುವಕರು ಎಷ್ಟೇ ಸುಸ್ಥಿತಿಯಲ್ಲಿದ್ದರೂ ಮದುವೆಗೆ ಒಪ್ಪಿಕೊಳ್ಳುತ್ತಿಲ್ಲ. ಯುವಕರು 40ರಿಂದ 50ವರ್ಷವಾದರೂ ಮದುವೆಯಾಗದೆ ಉಳಿದುಕೊಳ್ಳುವಂತಾಗಿದೆ. ಮೊದಲು ಮೇಲ್ವರ್ಗದವರಲ್ಲಿದ್ದ ಚಾಳಿ ಈಗ ರೈತಾಪಿ ಜನರಲ್ಲೂ ಬಂದಿದೆ. ಇದು ಸಾಮಾನ್ಯ ಸಂಗತಿ ಎನಿಸಿದರೂ, ಸಮಾಜದ ಮೇಲೆ ಬೀರಿರುವ ಪರಿಣಾಮ ಕೆಟ್ಟದ್ದಾಗಿದೆ ಎಂದು ಮನವಿ ಸಲ್ಲಿಸಿದರು.
ಕೋಲಾರ: ಸಿದ್ದರಾಮಯ್ಯ ಎಲ್ಲಿ ನಿಲ್ಲುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಗೆದ್ದಿತ್ತು. ಈ ಬಾರಿಯೂ ಗೆಲ್ಲುವುದಷ್ಟೇ ನಮ್ಮ ಗುರಿ ಎಂದು ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ತಾಲೂಕಿನ ಕೋರಗಂಡಹಳ್ಳಿಯಲ್ಲಿ ಸೋಮವಾರ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕಡೆಗಣಿಸಲಾಗಿದೆ. ಎಲ್ಲಿ ನೋಡಿದರೂ ರಸ್ತೆ ಗುಂಡಿಗಳು ಕಾಣುತ್ತಿವೆ. ಜನ ಆ ಗುಂಡಿಗಳಲ್ಲಿ ಬಿದ್ದು ಸಾಯುತ್ತಿದ್ದಾರೆ. ಬೆಳೆ ನಷ್ಟ ಪರಿಹಾರವನ್ನು ಇನ್ನೂ ನೀಡಿಲ್ಲ. ಬಿಜೆಪಿಯವರು ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ನಡೆಸಿ ವೀರಾವೇಶದ ಮಾತುಗಳನ್ನಾಡಿದ್ದಾರೆ. ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಿರುವುದು ರಾಜಕೀಯ ಶಕ್ತಿ ಬೆಳೆಸಿಕೊಳ್ಳುವುದಕ್ಕೆ ಮಾತ್ರ. ಅಂಬೇಡ್ಕರ್ ನೀಡಿದ ಮೀಸಲಾತಿ ಎಷ್ಟರ ಮಟ್ಟಿಗೆ ತಲುಪಿದೆ? ಆಯ್ದ ಕುಟುಂಬಗಳಿಗಷ್ಟೇ ಲಾಭವಾಗಿದೆ. ಕೋಟ್ಯಂತರ ಜನರು ಯಾವುದೇ ಸೌಲಭ್ಯ ಸಿಗದೆ ಇನ್ನೂ ಸಂಕಷ್ಟದಲ್ಲಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಎಷ್ಟು ಜನರಿಗೆ ಸಾಲ ನೀಡಿದ್ದೀರಿ? ಯಾರು ಎಷ್ಟು ಹಣ ದೋಚಿದ್ದೀರಿ ಎಂದು ಪ್ರಶ್ನಿಸಿದರು.
ಯರಗೋಳ್ಗೆ ಕೊಳಚೆ ನೀರು: ಬೆಂಗಳೂರಿನ ಕೊಳಚೆ ನೀರನ್ನು ಸರಿಯಾಗಿ ಶುದ್ಧೀಕರಿಸದೆ ಕೋಲಾರಕ್ಕೆ ಹರಿಸುತ್ತಿದ್ದಾರೆ. ಅದಕ್ಕೂ ಹಲವರು ಕಿರೀಟ ಹಾಕಿಸಿಕೊಂಡಿದ್ದಾರೆ. 2ನೇ ಹಂತದಲ್ಲಿ ಕೊಳಚೆ ನೀರನ್ನು ಶುದ್ಧೀಕರಣ ಮಾಡುವ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರಿದೆ. ಶುದ್ಧ ನೀರಿಗಾಗಿ ನಿರ್ಮಿಸಲಾದ ಯರಗೋಳ್ ಜಲಾಶಯ ತುಂಬಿದ್ದು, ಅದಕ್ಕೂ ಈ ಕೊಳಚೆ ನೀರು ಹರಿಯುತ್ತಿದೆ ಎಂದು ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಕೊಳವೆ ಬಾವಿಯಲ್ಲಿ ನೀರು ಬರುತ್ತಿದೆ. ಆದರೆ, ಹಾನಿಕಾರಕ ಅಂಶಗಳು ಇದ್ದು, ಮುಂದೆ ಜನರಿಗೆ ತೊಂದರೆಯಾಗಬಹುದು. ಹೀಗಾಗಿ, ಶುದ್ಧ ಕುಡಿಯುವ ನೀರು ಪೂರೈಸಲು ಜೆಡಿಎಸ್ ಒತ್ತು ನೀಡಲಿದೆ ಎಂದರು.
ಜೆಡಿಎಸ್ ಗೆ ದೇಣಿಗೆ
ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದ ರೈತ ಮುನಿಯಪ್ಪ ಅವರ ಪುತ್ರ ಅಶ್ವಿನ್ ಕುಮಾರ್ ಜೆಡಿಎಸ್ಗೆ ದೇಣಿಗೆಯಾಗಿ 25 ಸಾವಿರ ಮೊತ್ತದ ಚೆಕ್ ನೀಡಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮ ಕುಟುಂಬದ 1 ಲಕ್ಷ ಸಾಲ ಮನ್ನಾವಾಗಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.