ಎನ್.ಆರ್.ಪುರ: ದಲಿತರು ಸಂಘಟಿತರಾದರೆ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘಷರ್ ಸಮಿತಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ತಿಳಿಸಿದರು.
ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಡಿಎಸ್‌ಎಸ್ ತಾಲೂಕು ಸಮಿತಿ ಏರ್ಪಡಿಸಿದ್ದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರೊ. ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಹೋರಾಟ ಮಾಡಿ ಚಂದ್ರಗುತ್ತಿ ಜಾತ್ರೆಯಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಿಲ್ಲಿಸಲಾಗಿತ್ತು ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಮಹಿಳಾ ಘಟಕದ ಸಂಚಾಲಕಿ ಎಂ.ವಿ.ಭವಾನಿ ಮಾತನಾಡಿ, ಮಹಿಳೆಯರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸಬೇಕು. ಜೀವನದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣ ಅತಿ ಅವಶ್ಯಕ. ದಲಿತರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ದಲಿತ ಸಂಘಷರ್ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಮೃತ್ಯುಂಜಯ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ವಿಚಾರವನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಅವರು ಬರೆದಿರುವ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಪಟ್ಟಣದ ಮೇದರ ಬೀದಿ ಪ್ರತಿಭಾವಂತ ವಿದ್ಯಾರ್ಥಿ ಸಾಗರ್ ಅವರನ್ನು ಪುರಸ್ಕರಿಸಲಾಯಿತು. ತಾಲೂಕಿನಲ್ಲಿ ಕರ್ನಾಟಕ ದಲಿತ ಸಂಘಷರ್ ಸಮಿತಿಯ ನೋಂದಣಿಯ ಜವಾಬ್ದಾರಿಯನ್ನು ಮುಖಂಡ ಅಬ್ದುಲ್ ರೆಹಮಾನ್ ಅವರಿಗೆ ವಹಿಸಲಾಯಿತು.
ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ರಾಜೇಶ್ ನೇತೃತ್ವದಲ್ಲಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಎಂ.ಜೆ.ಸಿಜು (ತಾಲೂಕು ಸಂಚಾಲಕ), ಮುಳುವಳ್ಳಿ ಸಿದ್ದಪ್ಪ, ಹಿಳುವಳ್ಳಿ ರಾಜು, ರಾವೂರು ರವಿ, ಪ್ರಭು, ಕುಮಾರ್, ಎನ್.ಆರ್.ಪುರ ಕದೀರ್, ಕೆ.ಕಣಬೂರು ಉಮೇಶ್, ಮೇದರಬೀದಿ ಕಲ್ಲೇಶ್ (ಸಂಘಟನಾ ಸಂಚಾಲಕ) ಖಜಾಂಚಿಯಾಗಿ ಮೃತ್ಯುಂಜಯ ಅವರನ್ನು ನೇಮಕ ಮಾಡಲಾಯಿತು.
ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ತಾಲೂಕು ಸಂಚಾಲಕಿಯಾಗಿ ರಾವೂರು ವಸಂತಿ, ಸಂಘಟನಾ ಸಂಚಾಲಕರಾಗಿ ಆರ್. ರೇಣುಕಾ, ಮಂಗಳಾ, ಎಲ್.ರೇಣುಕಾ, ಯಲ್ಲಮ್ಮ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ದಲಿತರ ಹಾಗೂ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.