ನ್ಯೂಸ್

ದಲಿತರಿಗೆ ತಲುಪದ ಸರ್ಕಾರಿ ಯೋಜನೆ ಲಾಭ: ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

ಕನಕಪುರ :  ನಗರದ ಅಂಬೇಡ್ಕರ್ ಭವನದಲ್ಲಿ ತಹಸೀಲ್ದಾರ್ ವಿ.ಆರ್. ವಿಶ್ವನಾಥ್ ನೇತೃತ್ವದಲ್ಲಿ ಗುರುವಾರ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಯಾಯಿತು.

ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಶಿವಮುತ್ತು ಮಾತನಾಡಿ, ಪರಿಶಿಷ್ಟ ಜಾತಿ ಹಾಗು ಪಂಗಡದವರ ಕಲ್ಯಾಣಕ್ಕೆ ವಿವಿಧ ಇಲಾಖೆಗಳ ಮೂಲಕ ಸರ್ಕಾರ ಜಾರಿ ಮಾಡಿರುವ ಯೋಜನೆಗಳು ಅರ್ಹರಿಗೆ ದೊರೆಯುತ್ತಿಲ್ಲ. ಬಗರ್‌ಹುಕುಂ ಸಾಗುವಳಿ ಸಮಿತಿ ರಚನೆಯಾಗಿ ವರ್ಷ ಕಳೆದರೂ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ಸಮೀಪದ ಅಂಬೇಡ್ಕರ್ ಕಾಲನಿಯಲ್ಲಿ ನಿವಾಸಿಗಳಿಗೆ ಬಸ್ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಕೂಡಲೇ ಈ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ನಾಯಕನಹಳ್ಳಿ ಸರ್ವೇ ನಂ.112ರಲ್ಲಿ ಸರ್ಕಾರದಿಂದ ದಲಿತ ಕುಟುಂಬಗಳಿಗೆ ನಿವೇಶನ ಮಂಜೂರಾಗಿದ್ದರೂ ಹಕ್ಕುಪತ್ರ ವಿತರಿಸಲು ತಾಲೂಕು ಪಂಚಾಯತಿ ಇಒ ಮಧು ಹಾಗೂ ದೊಡ್ಡಾಲಹಳ್ಳಿ ಪಂಚಾಯತಿ ಅಧಿಕಾರಿ ಶಿವಲಿಂಗಯ್ಯ ಒಬ್ಬರ ಮೇಲೊಬ್ಬರು ಬೆಟ್ಟು ತೋರಿಸುತ್ತ ನಾಟಕವಾಡುತ್ತಿದ್ದಾರೆ. ವಿಳಂಬ ಮಾಡುತ್ತಿರುವುದರಿಂದ ಇಲ್ಲಿ ಸಹ ನಿವೇಶನಗಳು ಸಿಗದೇ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಬಿಎಸ್‌ಪಿ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟಾಚಲ ಆಕ್ರೋಶ ವ್ಯಕ್ತಪಡಿಸಿದರು.

ಬದುಕಿದ್ದಾಗ ಬೇಡ, ಶವಸಂಸ್ಕಾರಕ್ಕಾದರೂ ಜಾಗ ನೀಡಿ : ಮುಖಂಡ ಎಚ್.ಕೆ. ಕೃಷ್ಣಪ್ಪ ಸೇರಿ ಹಲವರು ವಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪರಿಶಿಷ್ಟರಿಗೆ ಸ್ಮಶಾನಕ್ಕೆ ಜಾಗವಿಲ್ಲ. ಸಾವಿನಲ್ಲೂ ರಾಜಕೀಯ ವಾಡಬೇಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಾಸ ಮಾಡಲು ಜಾಗ ನೀಡಲು ವಿಲರಾಗಿರುವ ನೀವು ಸತ್ತಾಗಲಾದರೂ ಶವಸಂಸ್ಕಾರಕ್ಕೆ ಜಾಗ ನೀಡಿ ಎಂದು ಒತ್ತಾಯಿಸಿದರು. ಶಾಸಕ ಡಿ.ಕೆ. ಶಿವಕುವಾರ್, ಸಂಸದ ಡಿ.ಕೆ. ಸುರೇಶ್ ಸ್ಮಶಾನಕ್ಕೆ ಜಾಗ ನೀಡುವ ಮಾತನಾಡುತ್ತಾರೆಯೇ ವಿನಹ ಕಾರ್ಯರೂಪಕ್ಕೆ ತರುತ್ತಿಲ್ಲ. ಎಲ್ಲೆಲ್ಲಿ, ಯಾರ‌್ಯಾರು ಸ್ಮಶಾನದ ಜಾಗಕ್ಕೆ ಮನವಿ ಮಾಡಿದ್ದಾರೆ ಎಂಬ ಮಾಹಿತಿಯೇ ನಿಮ್ಮ ಬಳಿಯಿಲ್ಲ.

ರಾಜರ ಆಳ್ವಿಕೆಯ 1927ರಲ್ಲಿ ಭೂ ಮಂಜೂರಾತಿಯಾಗಿದ್ದರೂ ಸಂಬಂಧಪಟ್ಟವರಿಗೆ ಇನ್ನೂ ನೀಡಿಲ್ಲ. ಭೂ ಮಂಜೂರಾತಿ ಸಮಿತಿ ಅಥವಾ ದರಖಾಸ್ತು ಸಮಿತಿಗಳು ಜೀವಂತವಾಗಿವೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ. ಕೃಷ್ಣ, ಸವಾಜ ಕಲ್ಯಾಣ ಕಲ್ಯಾಣಾಧಿಕಾರಿ ಜಯಪ್ರಕಾಶ್, ನಗರಸಭೆ ಆಯುಕ್ತೆ ಬಿ. ಶುಭಾ, ಎಸ್‌ಐಗಳಾದ ಉಷಾ ನಂದಿನಿ, ಹೇಮಂತ್‌ಕುವಾರ್, ತಾಪಂ ಇಒ ಮಧು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಜೆ.ಎಂ. ಶಿವಲಿಂಗಯ್ಯ, ಬಿಎಸ್‌ಪಿ. ಮುಖಂಡ ನೀಲಿ ರಮೇಶ್, ಹಾರೋಹಳ್ಳಿ ಕೋಟೆ ಕುವಾರ್, ತುಂಗಣಿ ಉಮೇಶ್,ಹಾರೋಹಳ್ಳಿ ಎಚ್.ಸಿ.ವೆಂಕಟೇಶ್, ಚಿಕ್ಕಸ್ವಾಮಿ, ಹುಣಸನಹಳ್ಳಿ ತಾಪಂ ವಾಜಿ ಸದಸ್ಯ ರಮೇಶ್, ದಲಿತ ಮುಖಂಡ ಗೋಪಿ, ಏಳಗಳ್ಳಿ ಶಿವು, ಬೊಮ್ಮನಹಳ್ಳಿ ಸುರೇಶ್ ಹಾಗೂ ತಾಲೂಕಿನ ವಿವಿಧ ದಲಿತ ಸಂಟನೆಗಳು ಸದಸ್ಯರು ಭಾಗವಹಿಸಿದ್ದರು.

ಕಲ್ಲು ಗಣಿಗಾರಿಕೆಗಾಗಿ ಭೂ ಮಂಜೂರಾತಿ ಇಲ್ಲ : ಶಾಸಕ ಡಿ.ಕೆ.ಶಿವಕುವಾರ್ ಸ್ವಗ್ರಾಮದ ದೊಡ್ಡಾಲಹಳ್ಳಿಯಲ್ಲಿ ಸರ್ವೇ ನಂ. 336ರಲ್ಲಿ 17 ವರ್ಷಗಳಿಂದ ಬಡ ದಲಿತ ಕುಟುಂಬಗಳು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಭೂ ಮಂಜೂರಾತಿ ಸಿಗದೆ ಕಂಗಾಲಾಗಿದ್ದಾರೆ. ಹತ್ತಿರದಲ್ಲೇ ಇರು ಸರ್ಕಾರಿ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಹುನ್ನಾರವಿದ್ದು, ಸ್ಥಳೀಯರನ್ನು ವಂಚಿಸಿ ಗಣಿ ವಾಲೀಕರಿಗೆ ಪರೋಕ್ಷ ಬೆಂಬಲ ನೀಡುವ ದೃಷ್ಟಿಯಿಂದ ಭೂ ಮಂಜೂರಾತಿ ಮಾಡುತ್ತಿಲ್ಲ. ಬಗರ್‌ಹುಕುಂ ಸಾಗುವಳಿ ರಚನೆಯ ಉದ್ದೇಶವೂ ಇಲ್ಲಿ ಫಲಪ್ರದವಾಗಿಲ್ಲ. ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಶಾಸಕರು ಮತ್ತು ಸಂಸದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ವೆಂಕಟಾಚಲ ಆರೋಪಿಸಿದರು.