ಕೋಲಾರ: ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರದೆ ನೊಂದವರಿಗೆ ನ್ಯಾಯದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ (ದೌರ್ಜನ್ಯ ಪ್ರತಿಬಂಧ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೌರ್ಜನ್ಯ ಪ್ರಕರಣಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಹಾಗೂ ಸಮಿತಿ ಸದಸ್ಯರಿಗೆ ಶೀಘ್ರ ತಲುಪಿಸಬೇಕು. ಪ್ರಕರಣಗಳು ಶೇ.100 ಇತ್ಯರ್ಥವಾಗಬೇಕು. ಚಾರ್ಜ್ಶೀಟ್ ಶೀಘ್ರ ಆಗಬೇಕು ಎಂದು ತಿಳಿಸಿದರು.
ಯಾವುದೇ ಸರ್ಕಾರಿ ಸ್ಥಳಕ್ಕೆ ಸುಳ್ಳು ದಾಖಲೆ ಸೃಷ್ಟಿಸಿದರೆ ಅಂಥವರ ಮೇಲೆ ಕಾನೂನು ರೀತಿಯ ಶಿಕ್ಷೆ ನೀಡಲಾಗುವುದು. ಯಾವುದೇ ಗ್ರಾಮದಲ್ಲಿ ಸ್ಮಶಾನದ ಕೊರತೆ ಇದ್ದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಜಮೀನು ಒದಗಿಸಲಾಗುವುದು. ಸರ್ಕಾರಿ ಜಾಗ ಇಲ್ಲವಾದಲ್ಲಿ ಸ್ಥಳ ಖರೀದಿಸಿ ಸ್ಮಶಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ವೆಬ್ಸೈಟ್ ಮೂಲಕ ತಿಳಿಸಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.
ಕಾಮಗಾರಿಗಳು ಶೇ.100 ಪೂರ್ಣಗೊಳ್ಳಬೇಕು. ಗುತ್ತಿಗೆದಾರರು ಅಕ್ರಮ ಮಾಡಿದರೆ ಬ್ಲಾಕ್ಲಿಸ್ಟ್ಗೆ ಸೇರಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗಳ ಪೂರ್ಣ ಮಾಹಿತಿ ನೀಡಬೇಕು. ತಪ್ಪುಗಳು ಕಂಡುಬಂದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಕೇಶ್ಕುಮಾರ್ ಮಾತನಾಡಿ, ಯಾವುದೇ ಯೋಜನೆಯಡಿ ಫಲಾನುಭವಿಗಳಿಗೆ ವಸ್ತುಗಳನ್ನು ಒದಗಿಸುವಾಗ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು. ಯೋಜನೆಗಳನ್ನು ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ಒದಗಿಸಬೇಕು. ಎಸ್ಸಿಪಿ ಮತ್ತು ಟಿಎಸ್ಪಿ ಕಾಮಗಾರಿಗಳ ಬಗ್ಗೆ ಪೂರ್ಣ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ಮಾತನಾಡಿ, ಪ್ರತಿ ತಿಂಗಳು ಮೂರನೇ ಭಾನುವಾರದಂದು ದೂರುದಾರ ದಿನ ಎಂದು ಆಚರಿಸಲಾಗುವುದು. ದಲಿತರ ಸಭೆಗಳ ಜತೆಗೆ ಜನಸಂಪರ್ಕ ಸಭೆಯನ್ನು ಸಹ ನಡೆಸಲಾಗುತ್ತಿದೆ. ಪ್ರಕರಣಗಳಲ್ಲಿ ಸಂಧಾನಕ್ಕೆ ಒತ್ತಡ ಏರುವವರ ಮೇಲೆ ದೂರು ನೀಡಿದರೆ ಕ್ರಮಕೈಗೊಳ್ಳಲಾಗುತ್ತದೆ. ಸಾಕ್ಷಿಗಳಿಗೆ ಭದ್ರತೆ ಮತ್ತು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಪ್ರತಿ ಪೊಲೀಸ್ ಠಾಣೆಯಲ್ಲಿ ದೂರು ಪೆಟ್ಟಿಗೆ ಇದ್ದು, ನಿಮ್ಮ ಸಮಸ್ಯೆಗಳನ್ನು ದೂರಿನ ಮೂಲಕ ಪೆಟ್ಟಿಗೆಯಲ್ಲಿ ಹಾಕಿದರೆ ಅವುಗಳನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣೀದೇವಿ ಮಾತನಾಡಿ, ಪ್ರಕರಣಗಳಲ್ಲಿ ನೊಂದವರಿಗೆ ಸಂಪೂರ್ಣ ರಕ್ಷಣೆ ಕಲ್ಪಿಸಲಾಗುತ್ತದೆ. ಸಾಕ್ಷಿದಾರರಿಗೆ ಪ್ರಕರಣದ ತನಿಖೆಯಲ್ಲಿ ಪೊಲೀಸರ ಪಾತ್ರವಿದ್ದರೆ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧಿಕಾರೇತರ ಸದಸ್ಯರು ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿದರು. ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಚನ್ನಬಸಪ್ಪ ಇತರರು ಉಪಸ್ಥಿತರಿದ್ದರು.
ಮದ್ಯಮಾರಾಟ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಆ ಮದ್ಯವು ಅನೇಕ ಹಳ್ಳಿಗಳ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಮದ್ಯದ ಬಾಟಲ್ ಮೇಲೆ ಲೇಬಲ್ ಇದ್ದು ಲೇಬಲ್ ಸಂಖ್ಯೆಯ ಮೂಲಕ ಮದ್ಯಮಾರಾಟ ಅಂಗಡಿಯನ್ನು ಕಂಡುಹಿಡಿದು ಅಬಕಾರಿ ಅಧಿಕಾರಿಗಳ ಮೂಲಕ ಅಂಗಡಿಯ ಪರವಾನಗಿ ರದ್ದುಪಡಿಸಿ ಅಂಗಡಿಯನ್ನು ಮುಚ್ಚಿಸಲಾಗುವುದು. ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಸಣ್ಣ ಅಂಗಡಿಯವರ ಮೇಲೆ ಸಹ ಕ್ರಮಕೈಗೊಳ್ಳಲಾಗುತ್ತದೆ.
|ಡಿ.ದೇವರಾಜ, ಎಸ್ಪಿ, ಕೋಲಾರ