ಹುಣಸೂರು ತಾಲೂಕು ಕಚೇರಿ ಆವರಣದಲ್ಲಿ ದಲಿತ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಿಂಗರಾಜ ಮಲ್ಲಾಡಿ, ಲಕ್ಷ್ಮೀ, ರಾಣಾಬಾಯಿ, ದೇವೇಂದ್ರ, ಕೆಂಪರಾಜು ಇತರರು ಇದ್ದರು. 
ನ್ಯೂಸ್

ದಲಿತ ಸಂಘಟನೆಗಳ ಪ್ರತಿಭಟನೆ

ಹುಣಸೂರು: ಅಲೆಮಾರಿ ಸಮುದಾಯದ ಕುಟುಂಬಗಳ ವಸತಿ ಯೋಜನೆಗೆ ಮೀಸಲಿಟ್ಟಿದ್ದ 300 ಕೋಟಿ ರೂ. ಅನುದಾನವನ್ನು ಸರ್ಕಾರ ಇತರ ಯೋಜನೆಗಳಿಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಸದಸ್ಯರು ನಗರದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳಿಗೆ 2022- 23ನೇ ಸಾಲಿನ ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳ ವಸತಿ ನಿರ್ಮಾಣಕ್ಕಾಗಿ 300 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿತ್ತು. ವಸತಿ ನಿರ್ಮಾಣ ಸಹಾಯಧನವನ್ನು 2 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು, ಒಟ್ಟು 300 ಕೋಟಿ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ, ಇದೀಗ ಆರ್ಥಿಕ ಇಲಾಖೆ ಜನವರಿ 21ರಂದು ವಸತಿ ಯೋಜನೆಗಳಿಗೆ ಬಿಡುಗಡೆಯಾಗಿದ್ದ 300 ಕೋಟಿ ರೂ. ಅನುದಾನವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳುವಂತೆ ಸೂಚನೆ ನೀಡಿದೆ. ಇದು ನಿರ್ಗತಿಕ ವಸತಿಹೀನ ಅಲೆಮಾರಿ ಕುಟುಂಬಗಳಿಗೆ ಸರ್ಕಾರ ಬಗೆದಿರುವ ದೊಡ್ಡ ಅನ್ಯಾಯವಾಗಿದೆ. 14 ಸಾವಿರ ಅಲೆಮಾರಿ ಕುಟುಂಬಗಳು ಮನೆ ಬಯಸಿ ಈಗಾಗಲೇ ಅರ್ಜಿ ಸಲ್ಲಿಸಿವೆ. ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಾದ ಕೊರಮ, ಸಿಳ್ಳೆಕ್ಯಾತ, ಕೊರಚ, ಹಂದಿಜೋಡಿ, ಸುಡುಗಾಡು ಸಿದ್ದ, ಚನ್ನದಾಸರು, ಹೊಲೆಯ ದಾಸರು, ಮಾಲ ದಾಸರು, ಬುಡುಗ ಜಂಗಮ, ದೊಂಬರು, ಹಕ್ಕಿಪಿಕ್ಕಿ, ಈರುಳಿಗ, ಮೇದ, ಗೊಂಡ, ಡೋಂಗ್ರಿ ಗೆರಾಸಿಯಾ ಮುಂತಾದ 73 ಅಲೆಮಾರಿ ಸಮುದಾಯಗಳಿಗೆ ಸರ್ಕಾರ ತುಂಬಾ ಅನ್ಯಾಯ ಮಾಡುತ್ತಿದೆ. ಊಟ ಕೊಟ್ಟು ತಟ್ಟೆ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ. ಸರ್ಕಾರಿ ಕೂಡಲೇ ತನ್ನ ನಿರ್ಣಯವನ್ನು ಹಿಂಪಡದು 300 ಕೋಟಿ ರೂ.ಗಳ ಅನುದಾನವನ್ನು ಮರಳಿ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಆದಿವಾಸಿ ಮುಖಂಡ ಶೇಖರ ಯಶೋಧರಪುರ, ಮುರುಗೇಶ, ಮಾದು, ಅಲೆಮಾರಿ ಸಮುದಾಯಗಳ ಅಂಬೇಡ್ಕರ್ ನಗರದ ಮುಖಂಡರಾದ ಶೇಖರ, ಹರೀಶ, ಮಂಗಳೂರುಮಾಳ ಗ್ರಾಮದ ಲಕ್ಷ್ಮೀ, ರಾಣಾಬಾಯಿ, ಶ್ರೀದೇವಿ, ಕಮಲಾಬಾಯಿ, ಸುಶೀಲಮ್ಮ, ಶಾಂತಾ, ಬಿ.ಆರ್. ಕಾವಲ್ ಗ್ರಾಮದ ರಾಮಾಬಾಯಿ, ಸುಂದರಬಾಯಿ ಲಕ್ಷ್ಮಣ, ಕಮಲಾ ಮಂಜುನಾಥ, ಕಾವೇರಿ, ಕಲ್ಪನಾ, ನಿರ್ಮಲ, ಗೀತಾ ಇತರರು ಇದ್ದರು. ಉಪತಹಸೀಲ್ದಾರ್ ಶಕೀಲಾ ಬಾನು ಮನವಿ ಸ್ವೀಕರಿಸಿದರು.