ಹುಣಸೂರು: ಆದಿವಾಸಿ ಮತ್ತು ದಲಿತ ಸಮುದಾಯಗಳನ್ನು ಒಗ್ಗೂಡಿಸಿ ಪ್ರಜಾಸತ್ತಾತ್ಮಕ ನೀತಿಗಳೊಂದಿಗೆ ದಲಿತ ಚಳವಳಿಯ ಮರುನಿರ್ಮಾಣ ಮಾಡಬೇಕಾದ ಅವಶ್ಯಕತೆಯಿದೆ ಎಂದು ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಹರಿಹರ ಆನಂದಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶುಕ್ರವಾರ ವೇದಿಕೆ ಸದಸ್ಯರು ಮತ್ತು ಆದಿವಾಸಿ ಮುಖಂಡರೊಂದಿಗೆ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ಕೇಂದ್ರೀಕೃತ ಸಮಾಜ ವ್ಯವಸ್ಥೆಯಲ್ಲಿ ಶ್ರೇಣಿ ಇರುವುದರಿಂದ ಕೆಲವು ಜಾತಿಗಳು ಅವಮಾನ ಎದುರಿಸುತ್ತಿವೆ ಮತ್ತು ಕೀಳರಿಮೆಯಿಂದ ನರಳುತ್ತಿವೆ ಎಂದರು.
ಸಂವಿಧಾನವು ಬುದ್ಧ, ಬಸವ ಮುಂತಾದ ನಾಡನ್ನು ಬೆಳಗಿದ ದಾರ್ಶನಿಕರ ವಿಚಾರಗಳನ್ನು ಅಳವಡಿಸಿ ಸಮಸಮಾಜ ಹಾಗೂ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರೂ ಆಳುವ ಸರ್ಕಾರಗಳು ಸರಿಯಾಗಿ ಜಾರಿಗೊಳಿಸದೆ ಇರುವುದರಿಂದ ಅವಮಾನಕ್ಕೊಳಗಾದ ಸಮುದಾಯಗಳು ಪುನಃ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತಿರುವುದು ಶೋಚನೀಯ. ಅವಮಾನಕ್ಕೆ ಒಳಗಾಗಿರುವ ಸಮುದಾಯಗಳು ಒಂದುಗೂಡಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಮುಂದಾಗಬೇಕು. ಈ ಕಾರಣಕ್ಕಾಗಿ ದಲಿತ ಚಳವಳಿಯ ನವನಿರ್ಮಾಣ ವೇದಿಕೆಯನ್ನು ಬಲಗೊಳಿಸಿ ಸಮುದಾಯಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು.
ದಲಿತ ಮುಖಂಡ ಬಂಗವಾದಿ ನಾರಾಯಣಪ್ಪ ಮಾತನಾಡಿ, ಶೋಷಿತರ ದನಿ ಒಂದಾಗಿ ಗಟ್ಟಿಯಾಗಿ ಹೊರಬರದಿದ್ದಲ್ಲಿ ಯಾವುದೇ ಹೋರಾಟಕ್ಕೆ ಫಲ ಸಿಗದು ಎಂದರು. ಡೀಡ್ ಸಂಸ್ಥೆ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಮುಂದಿನ ತಿಂಗಳು ಈ ಎಲ್ಲ ಸಮುದಾಯಗಳನ್ನು ಒಳಗೊಂಡ ಒಂದು ಜಾಗೃತಿ ಸಮಾವೇಶವನ್ನು ಹುಣಸೂರಿನಲ್ಲಿ ಏರ್ಪಡಿಸಲಾಗುವುದು ಎಂದರು.
ಮುಖಂಡರಾದ ಹೊರಳವಾಡಿ ನಂಜುಂಡೇಸ್ವಾಮಿ, ಕಟ್ಟೆಮಳಲವಾಡಿ ಅಶೋಕ್, ಕುಮಾರ್, ಚಿಟ್ಟಕ್ಯಾತನಹಳ್ಳಿ ಸುರೇಶ್, ಸದಾಶಿವನಗರ ಶಿವಣ್ಣ, ರಾಜಶೇಖರ್, ನಾಗನಹಳ್ಳಿ ಸುರೇಶ್, ಶೆಟ್ಟಳ್ಳಿ ಪಿ.ಕೆ.ರಾಮು, ರಾಣಿಗೇಟಿನ ಜಯಪ್ಪ, ಬಸವನಗಿರಿ ವಿಠಲ್ ನಾಣಚ್ಚಿ, ಕಲ್ಲಹಳ್ಳಿ ಬಸವರಾಜು, ಗೋವಿಂದಯ್ಯ, ಆದಿವಾಸಿ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಗಿರಿಜಾ ಮುಂತಾದವರು ಹಾಜರಿದ್ದರು.