ನ್ಯೂಸ್

ದಲಿತ ಕಾಲನಿಗಳಲ್ಲಿ ಮಂತ್ರಾಕ್ಷತೆ ವಿತರಣೆ

ಚಿತ್ರದುರ್ಗ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ, ಸ್ವಾಮಿಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಆಮಂತ್ರಣ ಅಭಿಯಾನ ಸಂಬಂಧ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಶುಕ್ರವಾರ ಕೋಡೆನಟ್ಟಿ, ಮಲ್ಲನಕಟ್ಟೆ ಸೇರಿ ವಿವಿಧ ದಲಿತ ಕಾಲನಿಗಳಿಗೆ ತೆರಳಿ ಅಲ್ಲಿನ ಜನರಿಗೆ ಮಂತ್ರಾಕ್ಷತೆ ವಿತರಿಸಿದರು.

ಮನೆ-ಮನೆಗೆ ಮಂತ್ರಾಕ್ಷತೆ ವಿತರಿಸುವ ಕಾರ್ಯ ಕೋಟೆನಾಡಲ್ಲಿ ಭರದಿಂದ ಸಾಗಿದ್ದು, ಜಿಲ್ಲೆಯ ವಿವಿಧ ಮಠಾಧೀಶರು ನಾನಾ ಕಾಲನಿಗಳಿಗೆ ತೆರಳಿ ಮಂತ್ರಾಕ್ಷತೆ ವಿತರಿಸುವ ಮೂಲಕ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.

ಜ. 22ರಂದು ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆ ಆಗುತ್ತಿದ್ದು, ನಿಮ್ಮ ಭಾಗದ ದೇಗುಲಗಳಲ್ಲೂ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವಂತೆ ಮಠಾಧೀಶರು ಜನರನ್ನು ಉತ್ತೇಜಿಸುತ್ತಿದ್ದಾರೆ.

ಶ್ರೀಕೃಷ್ಣ ಯಾದವಾನಂದ ಶ್ರೀಗಳ ಪಾದಪೂಜೆ ನೆರವೇರಿಸುವ ಮೂಲಕ ದಲಿತ ಕಾಲನಿಯ ಜನ ಕೂಡ ಆತ್ಮೀಯವಾಗಿ ಸ್ವಾಗತಿಸಿ, ಮಂತ್ರಾಕ್ಷತೆ ಸ್ವೀಕರಿಸಿ, ಆಶೀರ್ವಾದ ಪಡೆದರು.

ಶ್ರೀರಾಮಮಂದಿರ ತೀರ್ಥಕ್ಷೇತ್ರ ಸೇವಾ ಟ್ರಸ್ಟ್, ವಿಶ್ವ ಹಿಂದು ಪರಿಷತ್, ಬಜರಂಗದಳದ ಪದಾಧಿಕಾರಿಗಳಾದ ಆರ್.ದಿನೇಶ್, ತೇಜಸ್, ಸಿದ್ದೇಶ್, ನಾಗೇಶ್, ಅಖಿಲೇಶ್, ನಾಗಪ್ಪ, ಗ್ರಾಮದ ಮುಖಂಡರಾದ ನಟರಾಜ್, ರುದ್ರಪ್ಪ, ಸಂಗಮೇಶ್, ರಂಗಪ್ಪ, ಆಂಜನೇಯ ಇತರರಿದ್ದರು.