ನ್ಯೂಸ್

ದರ್ಶನ್‌ಗೆ ಸಿಗರೇಟ್ ಕೊಟ್ಟಿದ್ದರೆ ಸಮಗ್ರ ತನಿಖೆಯಾಗಲಿ

ಚಿತ್ರದುರ್ಗ: ಜೈಲಿನೊಳಗೆ ರೆಸಾರ್ಟ್‌ನಲ್ಲಿ ಕುರ್ಚಿ ಮೇಲೆ ಕೂತಂತೆ ಚಹಾ, ಸಿಗರೇಟ್ ಹಿಡಿದು ನಾಲ್ಕೈದು ಮಂದಿಯೊಂದಿಗೆ ದರ್ಶನ್ ಇರುವ ಚಿತ್ರ ನೋಡಿ ಶಾಕ್ ಆಗಿದೆ. ಇದು ನಿಜವೇ ಆಗಿದ್ದರೆ, ಸಮಗ್ರ ತನಿಖೆಯಾಗಲಿ ಎಂದು ಕೊಲೆಯಾದ ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಸರ್ಕಾರವನ್ನು ಒತ್ತಾಯಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದರ್ಶನ್‌ಗೆ ಮನೆ ಊಟ ಕೂಡ ನೀಡುತ್ತಿಲ್ಲವೆಂಬ ವಿಚಾರ ತಿಳಿದು ಸಮಾಧಾನದಿಂದ ಇದ್ದೆವು. ಆದರೆ, ವೈರಲ್ ಆಗಿರುವ ಫೋಟೋ ನೋಡಿದ ಮೇಲೆ ಅನುಮಾನ ಉಂಟಾಗುತ್ತಿದೆ ಎಂದು ಕಣ್ಣೀರಿಟ್ಟ ಅವರು, ಜೈಲಿನೊಳಗಿರುವ ಎಲ್ಲರಿಗೂ ಕಾನೂನು ಒಂದೇ. ಎಲ್ಲಿ ತಪ್ಪಾಗಿದೆ, ಇದಕ್ಕೆ ಯಾರೇ ಕಾರಣರಾಗಿದ್ದರೂ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

ಸರ್ಕಾರ ನೊಂದ ನಮ್ಮ ಕುಟುಂಬಕ್ಕೆ ನ್ಯಾಯ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದೆ. ಪೊಲೀಸ್ ಅಧಿಕಾರಿಗಳು ಆರಂಭದಿಂದಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಲಿದ್ದಾರೆ. ನ್ಯಾಯಾಧೀಶರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಪೂರ್ಣ ನಂಬಿಕೆ ಇದೆ. ಈಗಲೂ ಸಿಎಂ, ಸರ್ಕಾರಿ ಪರ ವಕೀಲರು, ಪೊಲೀಸರ ಮೇಲೂ ವಿಶ್ವಾಸವಿದೆ ಎಂದು ಹೇಳಿದರು.

ದರ್ಶನ್ ಫೋಟೋ ಗಮನಿಸಿದರೆ, ಪಶ್ಚಾತಾಪವಾದಂತೆ ಕಾಣುತ್ತಿಲ್ಲ. ಇಂಥವರಿಗೆ ಮನುಷ್ಯತ್ವ ಇದೆಯಾ?. ಮಗನನ್ನು ಕಳೆದುಕೊಂಡವರಿಗೆ ಮಾತ್ರ ಆ ನೋವು ಏನೆಂಬುದು ಗೊತ್ತು. ಪುತ್ರನ ಆತ್ಮಕ್ಕೆ ಶಾಂತಿ ಸಿಗಲು ನಿರ್ದಾಕ್ಷಿಣ್ಯವಾಗಿ ತನಿಖೆಯಾಗಬೇಕು. ಸೊಸೆಯ ಭವಿಷ್ಯದ ಕುರಿತು ಸಂಕಟ ಉಂಟಾಗಿದೆ. ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ ಎಂದು ಗದ್ಗದಿತರಾದರು.

ಮುಖಂಡ ಷಡಕ್ಷರಯ್ಯ ಮಾತನಾಡಿ, ಮಾಧ್ಯಮಗಳಲ್ಲಿ ಫೋಟೋ ನೋಡಿ ನನಗೂ ಶಾಕ್ ಆಯ್ತು. ತನಿಖೆ ಸರಿ ದಾರಿಯಲ್ಲಿತ್ತು. ಆದರೆ, ಜೈಲಿನೊಳಗೆ ಈ ರೀತಿ ಹೇಗೆ ನಡೆಯಿತು ಎಂಬ ಸಂಶಯ ಕಾಡುತ್ತಿದೆ. ಇದಕ್ಕೆ ಸಹಕರಿಸಿದವರಿಗೂ ಶಿಕ್ಷೆಯಾಗಲಿ. ಮುಂದೆ ಇದು ಪುನರಾವರ್ತನೆ ಆಗದಿರಲಿ ಎಂದು ಒತ್ತಾಯಿಸಿದರು.