ಚಿತ್ರದುರ್ಗ: ದರ್ಶನ್ ನಂಬಿ ಹೋದ, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಆರೋಪಿತರಾದ ಜಗದೀಶ್, ಅನುಕುಮಾರ್ ಅವರ ಕುಟುಂಬಗಳೀಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು, ತಾಯಂದಿರು ಮಕ್ಕಳಿಗಾಗಿ ಗೋಳಾಡುತ್ತಿದ್ದಾರೆ…
ನನ್ನ ಪುತ್ರನನ್ನು ಯಾವ ವಿಷಯವೂ ತಿಳಿಸದೆ, ಮೋಸದಿಂದ ಬಾಡಿಗೆ ಹೋಗೋಣವೆಂದು ಕರೆದುಕೊಂಡು ಹೋಗಿದ್ದಾರೆ. ದರ್ಶನ ಮೇಲಿನ ಅಭಿಮಾನಕ್ಕೆ ಅಮಾಯಕನಾದ ಜಗದೀಶ ಹೋಗಿದ್ದು, ಇನ್ನೂ ಹಿಂದಿರುಗಿಲ್ಲ ಎಂದು ತಾಯಿ ಸುಲೋಚನಮ್ಮ ಕಣ್ಣೀರು ಸುರಿಸಿದರು.
ಮನೆಯ ಪರಿಸ್ಥಿತಿ ಚೆನ್ನಾಗಿಲ್ಲ. ನಮಗೆ ಗಂಜಿ ಕಾಸೋರು ಯಾರು? ಆಟೋ ಚಾಲನೆ ಮಾಡಿಕೊಂಡು ದುಡಿದು ಬದುಕುತ್ತಿದ್ದ ನನ್ನ ಮಗನನೀಗ ಶಿವಮೊಗ್ಗ ಜೈಲಿಗೆ ಹಾಕಿದ್ದಾರೆ. ಪತ್ನಿ, ಮಕ್ಕಳು ಹಾಗೂ ಕುಟುಂಬದವರ ಸ್ಥಿತಿ ಹೇಳತೀರದಾಗಿದೆ. ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಗದ್ಗದಿತರಾದರು.
ದರ್ಶನ್ ಶ್ರೀಮಂತರಿಗೊಂದು, ಬಡವರಿಗೊಂದು ಮಾಡಬಾರದು. ದುಡಿಯಲು ನೆರವಾಗಿದ್ದ ಆಟೋ ಕೂಡ ಪೊಲೀಸರ ವಶದಲ್ಲಿದೆ. ಸಂಕಷ್ಟದಲ್ಲಿ ದಿನ ದೂಡುತ್ತಿರುವ ಮಗನನ್ನು ಬಿಡಿಸಿಕೊಂಡು ಬರುವವರ‌್ಯಾರು ಎಂದು ಪ್ರಶ್ನಿಸಿದರು.
ನನ್ನ ಮಗ ದರ್ಶನ್ ಅಭಿಮಾನಿ. ಆತನನ್ನು ನೋಡೋಕೆ ಹೋಗಿ ಪ್ರಕರಣದಲ್ಲಿ ಸಿಲುಕಿದ್ದಾನೆ. ತಿನ್ನೋಕೆ ಮುದ್ದೆಗೂ ಕಷ್ಟಪಡುವ ನಾವು ಜಾಮೀನಿನ ಮೂಲಕ ಬಿಡಿಸಿಕೊಂಡು ಬರಲು ಹಣವೆಲ್ಲಿಂದ ತರಬೇಕು ಎಂದು ಅನುಕುಮಾರ್ ತಾಯಿ ಜಯಮ್ಮ ದುಃಖ ಹೊರಹಾಕಿದರು.
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತ ಸ್ಥಿತಿಯಲ್ಲಿದ್ದೇವೆ. ನಾನೂ ಪ್ರತಿನಿತ್ಯ ಅರ್ಧ ಕೆ.ಜಿ ಹೂವು ಕಟ್ಟಿ ಜೀವನ ಮಾಡುತ್ತಿದ್ದೇನೆ. ನನ್ನ ಮಗನ ದುಡಿಮೆಯಲ್ಲಿ ಬದುಕು ನಡೆಯುತ್ತಿತ್ತು. ಮನೆಗೂ ಆಧಾರವಾಗಿದ್ದ. ಅಭಿಮಾನದ ಮೇಲೆ ಹೋದವನನ್ನು ಜೈಲಿನಿಂದ ಹೊರಗೆ ತರಲು ದರ್ಶನ್ ಪತ್ನಿ ಯತ್ನಿಸಬೇಕು ಎಂದು ಮನವಿ ಮಾಡಿದರು.