ನ್ಯೂಸ್

ದರ್ಶನ್‌ ಟೀಮ್‌ ರಾಕ್ಷಸ ಪ್ರವೃತ್ತಿ ಮೆರೆದಿದೆ

ಚಿತ್ರದುರ್ಗ: ರೇಣುಕಸ್ವಾಮಿಗೆ ನರಕಯಾತನೆ ನೀಡಿ ಕೊಲೆಗೈದ ಆರೋಪ ಎದುರಿಸುತ್ತಿರುವ ದರ್ಶನ್, ಪವಿತ್ರಾ ಗೌಡ ಸೇರಿ ಇಡೀ ಟೀಮ್‌ಗೂ ನರಕ ದರ್ಶನವಾಗುವಂತ ಶಿಕ್ಷೆಯಾಗಬೇಕು ಎಂದು ತಂದೆ ಕಾಶೀನಾಥಯ್ಯ ಶಿವನಗೌಡ್ರು ಒತ್ತಾಯಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುತ್ರನ ಸಾವಿಗೆ ಕಾರಣರಾದವರೂ ನರಳಿ, ನರಳಿಯೇ ಸಾಯಬೇಕು. ಚಿತ್ರ-ವಿಚಿತ್ರವಾಗಿ ಹಿಂಸಿಸಿ ಹತ್ಯೆ ಮಾಡಿದ ಯಾರಿಗೂ ಮನುಷ್ಯತ್ವ ಇಲ್ಲವೆಂಬುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯ, ಚಿತ್ರಗಳೇ ನಿದರ್ಶನ ಎಂದು ಕಿಡಿಕಾರಿದರು.

ಅಶ್ಲೀಲ ಪದ ಬಳಸಿ, ಚಪ್ಪಲಿಯಿಂದ, ಕರೆಂಟ್ ಶಾಕ್ ನೀಡಿ ಕ್ರೂರವಾಗಿ ವರ್ತಿಸಿದ್ದಾರೆ. ಯಾವ ಕಾರಣಕ್ಕೂ ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು. ಸರ್ಕಾರ, ಪೊಲೀಸರು, ನ್ಯಾಯಾಲಯದ ಮೇಲೆ ವಿಶ್ವಾಸವಿದ್ದು, ಶಿಕ್ಷೆಯಾಗುವ ನಂಬಿಕೆ ಇದೆ ಎಂದರು.

ತಾಯಿ ರತ್ನಪ್ರಭಾ ಮಾತನಾಡಿ, ಸ್ತ್ರೀಯನ್ನು ಕ್ಷಮೆಯಾಧರಿತ್ರಿ ಎಂದು ಬಣ್ಣಿಸುವ ಭಾರತೀಯ ಸಂಸ್ಕೃತಿಯಲ್ಲಿ ಮಹಿಳಾ ಕುಲಕ್ಕೆ ಪವಿತ್ರಾ ಗೌಡ ಅಪವಿತ್ರರಾಗಿದ್ದಾರೆ. ಕ್ಷಮಿಸಿದ್ದರೆ, ಇಂದು ಯಾರೂ ತೊಂದರೆಗೆ ಸಿಲುಕುವ ಪ್ರಸಂಗ ಎದುರಾಗುತ್ತಿರಲಿಲ್ಲ. ರಾಕ್ಷಸ ಪ್ರವೃತ್ತಿ ಮೆರೆದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಚಿಕ್ಕಪ್ಪ ಷಡಕ್ಷರಯ್ಯ ಮಾತನಾಡಿ, ‘ಡಿ’ ಗ್ಯಾಂಗ್ ಕೃತ್ಯ ಭಯಾನಕ. ಅದು ಊಹೆಗೂ ಮೀರಿದೆ. ರೇಣುಕಸ್ವಾಮಿಗೆ ಹಿಂಸಿಸಿರುವುದು ನೋಡಲಿಕ್ಕೂ ಸಾಧ್ಯವಾಗದ ರೀತಿಯಲ್ಲಿದೆ. ಕಣ್ಣಲ್ಲಿ ನೀರು ಬರುತ್ತೆ ಎಂದರು.

ಅಶ್ಲೀಲ ಸಂದೇಶ ಕಳುಹಿಸಿದ್ದು, ತಪ್ಪು. ಅದಕ್ಕೆ ಕೊಲೆಯೊಂದೆ ಶಿಕ್ಷೆಯಲ್ಲ. ಹೀಗೆ ಮಾಡುತ್ತ ಹೋದರೆ ದಿನಕ್ಕೆ ಅದೆಷ್ಟು ಕೊಲೆಗಳಾಗಬೇಕು?. ಕುಟುಂಬಕ್ಕೆ ತಿಳಿಸಿದ್ದರೆ ಸಾಕಿತ್ತು. ನಾವೇ ಬುದ್ಧಿ ಹೇಳಿ ಪಾಠ ಕಲಿಸುತ್ತಿದ್ದೆವು. ಆದರೆ, ಕ್ರೌರ್ಯವಾಗಿ ಕೊಲೆಗೈದು ತಪ್ಪು ಮಾಡಿದವರಿಗೂ ತಕ್ಕ ಶಿಕ್ಷೆಯಾಗಲಿ ಎಂದು ಸರ್ಕಾರ, ನ್ಯಾಯಾಂಗಕ್ಕೆ ಕೋರಿದರು.