ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿ ಸಲ್ಲಿಸಲು ಬಳ್ಳಾರಿ ಜೈಲು ಅಧಿಕಾರಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ ಅರ್ಜಿದಾರರು ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದಾರೆ. ಅವರನ್ನು ವಿಜಯನಗರ ವೈದ್ಯಕೀಯ ಸಂಸ್ಥೆಯಲ್ಲಿ (ವಿಮ್ಸ್) ತಪಾಸಣೆಗೊಳಪಡಿಸಲಾಗಿದೆ.
ವೈದ್ಯರ ಸೂಚನೆ ಮೇರೆಗೆ ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿದ್ದು ಸರ್ಜರಿ ಅಗತ್ಯವಿದೆ ಎಂದಿದ್ದಾರೆ. ಇದನ್ನು ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಪರ ವಕೀಲರಿಗೆ ಸೂಚನೆ ನೀಡಿದೆ. ಜತೆಗೆ ಅರ್ಜಿದಾರರ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಸಲ್ಲಿಸಬೇಕು ಎಂದು ಬಳ್ಳಾರಿ ಜೈಲು ಅಧಿಕಾರಿಗೆ ನಿರ್ದೇಶಿಸಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದೆ.