ನ್ಯೂಸ್

ತ್ಯಾಮಗೊಂಡ್ಲು ಆಸ್ಪತ್ರೆಯೇ ರೋಗಗ್ರಸ್ಥ: ವೈದ್ಯಾಧಿಕಾರಿಗೆ ಬಡ್ತಿ ಕೊಟ್ಟು ವರ್ಗ 3 ತಿಂಗಳ ರಜೆ ಮುಗಿದರೂ ಮರಳದ ಪ್ರಸೂತಿ ತಜ್ಞೆ

ತ್ಯಾಮಗೊಂಡ್ಲು: ಕರೊನಾ ವೇಳೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದ ತ್ಯಾಮಗೊಂಡ್ಲು ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲೀಗ ವೈದ್ಯರ ಕೊರತೆ ಕಾಡುತ್ತಿದೆ. ವೈದ್ಯಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದವರು ಬಡ್ತಿ ಮೇರೆಗೆ ವರ್ಗವಾಗಿದ್ದಾರೆ. ಈ ನಡುವೆ ಮೂರು ತಿಂಗಳು ರಜೆ ಪಡೆದಿದ್ದ ಪ್ರಸೂತಿ ತಜ್ಞೆ ಅವಧಿ ಮುಗಿದರೂ ಕರ್ತವ್ಯಕ್ಕೆ ಮರಳಿಲ್ಲ. ಸದ್ಯ ಮಕ್ಕಳ ತಜ್ಞರು ಪ್ರಭಾರಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಆಸ್ಪತ್ರೆಗೆ 17 ಸಿಬ್ಬಂದಿ ಅವಶ್ಯವಿದೆ.

ಆಸ್ಪತ್ರೆಗೆ ಪ್ರತಿದಿನ ಐನೂರಕ್ಕೂ ಹೆಚ್ಚು ಜನ ಬರುತ್ತಾರೆ. ಎರಡು ದಿನಕ್ಕೊಮ್ಮೆ ಬರುವ ವೈದ್ಯರು 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಇಂಥ ಸ್ಥಿತಿ ಬಗ್ಗೆ ಗಮನಕ್ಕೆ ತಂದಿದ್ದರೂ ಜಿಲ್ಲಾ ವೈದ್ಯಾಧಿಕಾರಿಗಳು ವೈದ್ಯರನ್ನು ನೇಮಿಸಿಲ್ಲ. ವರ್ಗವಾಗುತ್ತಿರುವ ವೈದ್ಯರ ಸ್ಥಾನಕ್ಕೆ ಬೇರೊಬ್ಬ ವೈದ್ಯರು ಬರುವವರೆಗೂ ಕೆಲಸದಿಂದ ಬಿಡುಗಡೆ ಆಗಬಾರದೆಂಬ ನಿಯಮ ಇದ್ದರೂ ಬದಲಿ ವೈದ್ಯಾಧಿಕಾರಿಯ ವ್ಯವಸ್ಥೆ ಮಾಡದೆ ವೈದ್ಯಾಧಿಕಾರಿಯನ್ನು ಬಿಡುಗಡೆ ಮಾಡಲಾಗಿದೆ.

40 ಹಳ್ಳಿಗಳಿಗೆ ಒಂದೇ ಆಸ್ಪತ್ರೆ: ತ್ಯಾಮಗೊಂಡ್ಲು ಸುತ್ತಮುತ್ತಲ 40 ಹಳ್ಳಿಗಳಿಗೆ ಇರುವುದು ಇದೊಂದೇ ಆಸ್ಪತ್ರೆ. ಪೂರ್ಣ ಪ್ರಮಾಣದಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾಗ ಏನೇ ಆರೋಗ್ಯ ಸಮಸ್ಯೆ ಇದ್ದರೂ ಜನರು ಖಾಸಗಿ ಆಸ್ಪತ್ರೆ ಕಡೆ ಮುಖ ಮಾಡುತ್ತಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ರಾತ್ರಿಯಲ್ಲಿ ವೈದ್ಯರೇ ಇರಲ್ಲ: ವೈದ್ಯಾಧಿಕಾರಿಗಳ ವಸತಿಗೃಹ ಇಲ್ಲದಿರುವುದರಿಂದ ರಾತ್ರಿ ಪಾಳಿಯಲ್ಲಿ ವೈದ್ಯರು ಇರುವುದಿಲ್ಲ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರಬೇಕು ಎಂಬ ಸರ್ಕಾರದ ಆದೇಶ ಇದ್ದರೂ, ಪಾಲಿಸುವುದಿಲ್ಲ. ಸರ್ಕಾರ ಕೂಡ ಇಲ್ಲಿ ವೈದ್ಯಾಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿಲ್ಲ. ಸದ್ಯ ಪ್ರಭಾರ ವೈದ್ಯಾಧಿಕಾರಿ ಆಗಿರುವವರು ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.

ವಸತಿಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ: ಹಿಂದಿನ ಶಾಸಕ ನಾಗರಾಜು ಅವರು ವೈದ್ಯಾಧಿಕಾರಿಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಂಡು, ಜಾಗ ಗುರುತಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹನಿರ್ದೇಶಕರಿಗೆ ಪತ್ರ ಬರೆದಿದ್ದರು. ಈ ಜಾಗದಲ್ಲಿ ಬಹುಮಹಡಿ ಕಟ್ಟಡ ಕಟ್ಟುವ ಉದ್ದೇಶ ಅವರದ್ದಾಗಿತ್ತು. ಅದರಂತೆ ಜಿಲ್ಲಾ ವೈದ್ಯಾಧಿಕಾರಿ ಅವರು ತಾಲೂಕು ವೈದ್ಯಾಧಿಕಾರಿಗೆ ಜಾಗ ಪರಿಶೀಲಿಸಲು ಸೂಚಿಸಿದ್ದರು. ಆದರೆ, ಈ ವಿಷಯದಲ್ಲಿ ಟಿಎಚ್‌ಒ ನಿರಾಸಕ್ತಿ ತೋರಿದ್ದರಿಂದ, ಈ ಯೋಜನೆ ಕಾಗದದ ಮೇಲೆ ಉಳಿದುಕೊಳ್ಳುವಂತಾಗಿದೆ. ಈ ವಿಷಯವಾಗಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಆಸಕ್ತಿ ವಹಿಸಿದರೆ, ವಸತಿಗೃಹ ನಿರ್ಮಾಣಕ್ಕೆ ಅನುಕೂಲವಾಗಬಹುದು.

ತ್ಯಾಮಗೊಂಡ್ಲು ಆಸ್ಪತ್ರೆ ವೈದ್ಯರ ಸಮಸ್ಯೆ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಜತೆ ಮಾತುಕತೆ ನಡೆಸಿದ್ದೇನೆ. ಆರೋಗ್ಯ ಸಚಿವರ ಬಳಿ ಚರ್ಚಿಸಿ, ಕಾಯಂ ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇನೆ. ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ ವೈದ್ಯರ ಕೊರತೆ ವಿಷಯ ಗಮನಕ್ಕೆ ಬರುತ್ತಲೇ ತಾತ್ಕಾಲಿಕವಾಗಿ ಇಬ್ಬರು ವೈದ್ಯರನ್ನು ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಅವರಲ್ಲಿ ಒಬ್ಬರು ಈಗಾಗಲೆ ಕೆಲಸ ನಿರ್ವಹಿಸುತ್ತಿದ್ದು, ಇನ್ನೊಬ್ಬರು ವರದಿ ಮಾಡಿಕೊಂಡಿಲ್ಲ. ಸರ್ಕಾರದ ಆದೇಶದಂತೆ ವರ್ಗಾವಣೆ ಆಗಿದ್ದ ವೈದ್ಯರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಡಾ. ತಿಪ್ಪೇಸ್ವಾಮಿ, ಜಿಲ್ಲಾ ವೈದ್ಯಾಧಿಕಾರಿ