ವಿಜಯವಾಣಿ ಸುದ್ದಿಜಾಲ ಕೋಲಾರ
ದೇಶದ ಬೆನ್ನೆಲುಬಾಗಿರುವ ರೈತರು ಮಣ್ಣಿನ ಫಲವತ್ತತೆ ಕಾಪಾಡುವ ಸಂಕಲ್ಪ ಮಾಡಬೇಕು. ರಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆ ನಿಲ್ಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ್ ಎಸ್ ಹೊಸಮನಿ ತಿಳಿಸಿದರು.
ಕೋಲಾರ ತಾಲ್ಲೂಕಿನ ಮಂಗಸAದ್ರದ ಲಕ್ಷಿö್ಮÃನಾರಾಯಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತೋಟಗಾರಿಕಾ ಮಹಾವಿದ್ಯಾಲಯ, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಗ್ರಾಮೀಣ ಕಾರ್ಯಾನುಭವ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಅಭಿವೃದ್ದಿಗಾಗಿ ಸರ್ಕಾರ ಕೃಷಿ, ತೋಟಗಾರಿಕಾ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಕುರಿತು ಹಳ್ಳಿಗಳಲ್ಲಿರುವ ರೈತರಿಗೆ ಮಾಹಿತಿಯ ಕೊರತೆ ಇದೆ. ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಿ, ಹೆಚ್ಚಿನ ರೈತರನ್ನು ಸೇರಿಸಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಕುರಿತು ಸಲಹೆ ನೀಡಿಬೇಕು ಎಂದರು.
ನಾವು ಪ್ರತಿ ವರ್ಷ ಜಲದಿನ, ಭೂದಿನ ಆಚರಿಸುತ್ತೇವೆ. ಇವು ಆಚರಣೆಗೆ ಸೀಮಿತವಾಗದೇ ರೈತರಿಗೆ ಸಾವಯವ ಕೃಷಿಯ ಕುರಿತು, ಭೂಮಿಯ ರಕ್ಷಣೆಯ ಕುರಿತು ಮಾರ್ಗದರ್ಶನ ನೀಡಬೇಕು. ಈಗಾಗಲೇ ಅಂತರ್ಜಲ ೧೫೦೦ ಅಡಿ ತಲುಪಿದೆ ಆದ್ದರಿಂದ ಅಂತರ್ಜಲ ರಕ್ಷಣೆ ಮಾಡುವ ಕುರಿತು ಅರಿವು ನೀಡಬೇಕು ಎಂದರು.
ಗ್ರಾಮೀಣ ಕಾರ್ಯಾನುಭವ ಶಿಬಿರಗಳಲ್ಲಿ ತೋಟಗಾರಿಕಾ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರೈತರಿಗೆ ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ತಿಳಿಸಿಕೊಡಿ. ಕೃಷಿ ಜತೆಗೆ ಉಪಕಸುಬುಗಳಾದ ಕುರಿ, ಕೋಳಿ, ಹಂದಿ ಸಾಕಾಣೆ ಕುರಿತು ಮಾರ್ಗದರ್ಶನ ನೀಡಿ ಎಂದರು.
ಪ್ರತಿಯೊಬ್ಬರು ಕನಿಷ್ಠ ಸಂವಿಧಾನ ಹಾಗೂ ಸಾಮಾನ್ಯ ಕಾನೂನುಗಳನ್ನು ತಿಳಿದುಕೊಂಡು, ಅದನ್ನು ಪಾಲಿಸುವ ಮೂಲಕ ಜೀವನವನ್ನು ಭದ್ರ ಪಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಯುವಕರು ಮಾದಕ ವಸ್ತುಗಳ ದಾಸರಾಗದಂತೆ ಎಚ್ಚರವಹಿಸಬೇಕು. ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಹಿಳೆಯರ ಮೇಲಿನ ದೌರ್ಜನ್ಯ ಇವೆಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿದ್ದು, ಇದರ ಅರಿವು ಅಗತ್ಯ ಎಂದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಆರ್.ಕೆ.ಮೇಸ್ತ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಶಿಬಿರದಲ್ಲಿ ರೈತರಿಗೆ ಕೃಷಿ, ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ಮಾರ್ಗದರ್ಶನ ನೀಡಿ, ಸಾವಯವ ಕೃಷಿಗೆ ಪ್ರೇರಣೆ ನೀಡಿ, ರೈತರಿಗೆ ಆರೋಗ್ಯಕರ ಕೃಷಿ ವಿಧಾನಗಳ ಕುರಿತು ತಿಳಿಸಿಕೊಡಿ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಯಲಕ್ಷಿö್ಮÃ ಪವಾರ್, ಕೆ.ಕೊಂಡಪ್ಪ, ಅರೆಕಾಲಿಕ ಕಾನೂನು ಸ್ವಯಂಸೇವಕ ವೆಂಕಟಾಚಲಪತಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ೨೭ ಕೆ.ಎಲ್.ಆರ್. ೦೩ : ಕೋಲಾರ ತಾಲ್ಲೂಕಿನ ತಾಲ್ಲೂಕಿನ ಮಂಗಸAದ್ರದ ಲಕ್ಷಿö್ಮÃನಾರಾಯಣ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತೋಟಗಾರಿಕಾ ಮಹಾವಿದ್ಯಾಲಯ, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಗ್ರಾಮೀಣ ಕಾರ್ಯಾನುಭವ ಶಿಬಿರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ್ ಎಸ್ ಹೊಸಮನಿ ಚಾಲನೆ ನೀಡಿದರು.