ಎನ್.ಆರ್.ಪುರ ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಕಂಡು ಬಂದ ಕಾಡಾನೆಗಳ ಹಿಂಡು. 
ನ್ಯೂಸ್

ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂಯ ವಿಠಲ ಗ್ರಾಮದ ಕೆಸವಿ ಮಂಜುನಾಥ ಎಂಬುವರ ತೋಟಕ್ಕೆ 19 ಕಾಡಾನೆಗಳ ಹಿಂಡು ಭಾನುವಾರ ರಾತ್ರಿ ನುಗ್ಗಿ ಬಾಳೆ, ಅಡಕೆ ನಾಶ ಮಾಡಿದೆ.

ರಾತ್ರಿ 2 ಗಂಟೆ ಸುಮಾರಿಗೆ ಕಾಡಾನೆಗಳು ತೋಟದ ತಂತಿ ಬೇಲಿ ಮುರಿದು ನೂರಾರು ಬಾಳೆ , ಅಡಕೆ ಮರಗಳನ್ನು ಹಾಳು ಮಾಡಿದೆ. ಮನೆಯ ಸಮೀಪವೇ ತೋಟ ಇರುವುದರಿಂದ ನಾಯಿಗಳು ಬೊಗಳಿದ್ದು ಮನೆಯವರಿಗೆ ಎಚ್ಚರವಾಗಿ ಪಟಾಕಿ ಸಿಡಿಸಿದ್ದಾರೆ. ಬೆಳಗ್ಗೆ 4 ರಿಂದ 5 ಗಂಟೆ ಸುಮಾರಿಗೆ ಕಾಡಾನೆಗಳ ಹಿಂಡು ಬೇಲಿ ದಾಟಿ ಮುಂದೆ ಹೋಗಿ ಪ್ರಭಾಕರ ಶೆಟ್ಟರು ಎಂಬುವರ ಮನೆಯ ಹತ್ತಿರ ಹೋಗಿ ಮುಂದೆ ಸಾಗಿದೆ. ಬೆಳಗ್ಗೆ ವಿಷಯ ತಿಳಿದ ಉಪವಲಯ ಅರಣ್ಯಾಧಿಕಾರಿ ಗೌಸ್ ಮೊಹಿಯುದ್ದೀನ್, ಎಲಿೆಂಟ್ ಟಾಸ್ಕ್‌ಪೋರ್ಸ್ ತಂಡದವರು ಆಗಮಿಸಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಹಾಗಲಮನೆಯ ಭದ್ರಾ ಹಿನ್ನೀರು ಭಾಗಕ್ಕೆ ಅಟ್ಟಿದ್ದಾರೆ.

ಸೋಮವಾರ ಸಂಜೆ 7ಕ್ಕೆ ಕಾಡಾನೆಗಳ ಹಿಂಡು ಕಡಹಿನಬೈಲು ಗ್ರಾಪಂಯ ಚೆನಮಣೆ ಕಡೆಯಿಂದ ಹಾಗಲಮನೆ ಕಡೆಗೆ ಬಂದಿದ್ದು ಅರಣ್ಯ ಇಲಾಖೆಯವರು 7 ಕಾಡಾನೆಗಳ ಹಿಂಡನ್ನು ಸಾತ್ಕೋಳಿ ಭದ್ರಾ ಹಿನ್ನೀರಿನ ಕಡೆಗೆ ಕಳಿಸಲು ಕಾರ್ಯಾಚರಣೆ ನಡೆಸಿದರು.