ಹೈದರಾಬಾದ್: ತನ್ನ ನಾಲ್ವರು ಶಾಸಕರನ್ನು ಖರೀದಿಸಲು ಬಿಜೆಪಿ ತಲಾ 100 ಕೋಟಿ ರೂಪಾಯಿ ಆಮಿಷ ಒಡ್ಡಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಆರೋಪಿಸಿದ್ದು, ಈ ಸಂಬಂಧ ದೂರು ದಾಖಲಿಸಿದೆ. ರಂಗಾರೆಡ್ಡಿ ಜಿಲ್ಲೆಯ ಟಿಆರ್ಎಸ್ ಶಾಸಕರಿಗೆ ಆಮಿಷ ಒಡ್ಡಿದ ಬಿಜೆಪಿಯ ಮುಖಂಡರು ಉಳಿದುಕೊಂಡಿದ್ದ ಫಾಮ್ರ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. 15 ಕೋಟಿ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ನಲಗೊಂಡ ಜಿಲ್ಲೆಯ ಮನುಗೋಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಯತ್ನ ನಡೆದಿದ್ದು, ಅ. 31ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಾಗಿಸುವ ರ್ಯಾಲಿಯಲ್ಲಿ ಈ ಶಾಸಕರನ್ನು ಬಿಜೆಪಿಗೆ ಸೇರಿಕೊಳ್ಳುವ ಉದ್ದೇಶ ಇತ್ತು ಎಂದು ಟಿಆರ್ಎಸ್ ಆರೋಪಿಸಿದೆ. ಈ ಮಧ್ಯೆ, ತಿರುಗೇಟು ನೀಡಿರುವ ಬಿಜೆಪಿ, ಇದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಹೂಡಿರುವ ನಾಟಕ ಎಂದು ತಿರುಗೇಟು ನೀಡಿದೆ. ಹಣ, ಪದವಿ, ಸರ್ಕಾರಿ ಗುತ್ತಿಗೆಗಳ ಆಮಿಷ ಒಡ್ಡಲಾಯಿತೆಂದು ಟಿಆರ್ಎಸ್ ಶಾಸಕರು ಆರೋಪಿಸಿದ್ದಾರೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಹೇಳಿದ್ದಾರೆ. ಆದರೆ, ಬಂಧಿತರು ಯಾವ ಪಕ್ಷದವರೆಂದು ಅವರು ತಿಳಿಸಿಲ್ಲ.
‘ಮನುಗೋಡ್ ಉಪಚುನಾವಣೆಯಲ್ಲಿ ಸೋಲುವ ಭಯ ಕೆಸಿಆರ್ಗೆ ಕಾಡುತ್ತಿದೆ. ಆದ್ದರಿಂದ ಈ ರೀತಿಯ ನಾಟಕವನ್ನಾಡುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ.ಕೆ. ಅರುಣಾ ಹೇಳಿದ್ದಾರೆ. ‘ರಂಗಾರೆಡ್ಡಿಯ ಫಾರ್ಮ್ಹೌಸ್ ಮೇಲೆ ನಡೆದ ದಾಳಿಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಬಂಧಿತರು ಬಿಜೆಪಿಯವರಲ್ಲ. ಅವರನ್ನು ನಾವು ನೋಡಿಯೇ ಇಲ್ಲ. ಅಷ್ಟಕ್ಕೂ ಅವರನ್ನು ಫಾರ್ಮ್ಹೌಸ್ಗೆ ಕರೆದೊಯ್ದವರು ಯಾರು? ಇದರ ಹಿಂದೆ ಕೆಸಿಆರ್ ಕೈವಾಡ ಇದೆ’ ಎಂದು ಆರೋಪಿಸಿದ್ದಾರೆ. ‘ಕೆಸಿಆರ್ ಕುಟುಂಬದವರು ಕಾಳೇಶ್ವರಂ ಯೋಜನೆ, ಪಾಲಮುರು ಯೋಜನೆ, ಮಿಷನ್ ಭಗೀರಥ, ಮಿಷನ್ ಕಾಕತೀಯ ಹಾಗೂ ಇನ್ನಿತರ ಯೋಜನೆಗಳಲ್ಲಿ ಕೋಟಿಗಟ್ಟಲೆ ಹಣವನ್ನು ನುಂಗಿಹಾಕಿದ್ದಾರೆ. ಟಿಆರ್ಎಸ್ನ ದುರಾಡಳಿತದಿಂದ ಜನ ರೋಸಿ ಹೋಗಿದ್ದು, ಚುನಾವಣೆಗಳಲ್ಲಿ ಗೆಲ್ಲುವುದು ಕಷ್ಟವಾಗಿದೆ’ ಎಂದು ಅರುಣಾ ಆಪಾದಿಸಿದ್ದಾರೆ.
ಮೊಯಿನಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಪಕ್ಷದ ಶಾಸಕರಾದ ಜಿ.ಬಾಲರಾಜ್ (ಅಚಂಪೇಟ್), ರೋಹಿತ್ ರೆಡ್ಡಿ (ತಂಡೂರ್), ಹರ್ಷವರ್ಧನ್ ರೆಡ್ಡಿ (ಕೊಲ್ಲಾಪುರ) ಮತ್ತು ಆರ್.ಕಾಂತಾ ರಾವ್ (ಪಿನಪಾಕ) ಅವರನ್ನು ಸಂರ್ಪಸಿದ್ದ ಫರೀದಾಬಾದ್ ಮೂಲದ ಸತೀಶ್ ಶರ್ವ, ಹೈದರಾಬಾದ್ನ ನಂದಾ ಕುಮಾರ್ ಮತ್ತು ಡಿ.ಸಿಂಹಯಾಜಿ ಸ್ವಾಮಿ (ಬಂಧಿತರು), ಬಿಜೆಪಿ ಸೇರಿದರೆ ತಲಾ 100 ಕೋಟಿ ರೂ., ಪದವಿ ಮತ್ತು ಕೇಂದ್ರ ಸರ್ಕಾರದ ಗುತ್ತಿಗೆಗೆಗಳನ್ನು ಕೊಡಿಸುವುದಾಗಿ ಆಮಿಷ ಒಡ್ಡಿದ್ದರು. ಈ ಸಂಬಂಧ ಮಾತನಾಡಲು ಅ. 26ರಂದು ರಂಗಾರೆಡ್ಡಿ ಜಿಲ್ಲೆಯ ಫಾಮರ್್ಹೌಸ್ನಲ್ಲಿ ಭೇಟಿಯಾಗುವುದಾಗಿ ಹೇಳಿದ್ದರು. ಇತರ ಶಾಸಕರನ್ನು ಸಂಘಟಿಸಿ ಬಿಜೆಪಿಗೆ ಸೇರುವಂತೆ ಮಾಡಿ ತಲಾ 50 ಕೋಟಿ ರೂ. ನೀಡಲಾಗುವುದು. ಈ ಮೂಲಕ ಕೆಸಿಆರ್ ನೇತೃತ್ವದ ಸರ್ಕಾರ ಅಸ್ಥಿರಗೊಳಿಸಲು ಸಂಚು ನಡೆಸಲಾಗಿತ್ತು ಎಂದು ಟಿಆರ್ಎಸ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 120ಬಿ, 506 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ.