ಫೋಟೋ 16 ವಿಕ್ರಂ 3
ಕೆಸಿಸಿ ಬ್ಯಾಂಕ್
Dharwad,Election, KCC, Bank, President,ಕೆಸಿಸಿ, ಬ್ಯಾಂಕ್, ಅಧ್ಯಕ್ಷ, ಗದ್ದುಗೆಗೆ, ಚುನಾವಣೆ, ನಾಳೆ,
ತೆರೆಮರೆಯಲ್ಲಿ ಆಕಾಂಕ್ಷಿಗಳ ಕಸರತ್ತು
ವಿಕ್ರಮ ನಾಡಿಗೇರ ಧಾರವಾಡ
ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ (ಕೆಸಿಸಿ)ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ರಾಜೀನಾಮೆ ನೀಡಿದ್ದರಿಂದ ಹೊಸ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಿರ್ದೇಶಕರು ತೆರೆಮರೆಯಲ್ಲೇ ಕಸರತ್ತು ನಡೆಸಿದ್ದಾರೆ.
ವಿಭಜನಾಪೂರ್ವ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 11 ಜನ ಸೇರಿ ಒಟ್ಟು 20 ನಿರ್ದೇಶಕರಿದ್ದಾರೆ. ಬಾಪುಗೌಡರ ಪೂರ್ವದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಐ.ಎಸ್. ಪಾಟೀಲ ಅಧ್ಯಕ್ಷರಾಗಿದ್ದರು. 2018ರ ಚುನಾವಣೆ ಬಳಿಕ ಬಿಜೆಪಿ ಬೆಂಬಲಿತರಿಗೇ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಮಾತಿತ್ತು. ಆದರೆ, ಬಿಜೆಪಿ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಾಪುಗೌಡ ಪಾಟೀಲ ಕೊನೇ ಘಳಿಗೆಯಲ್ಲಿ ಕಾಂಗ್ರೆಸ್ಗೆ ಸೇರಿ ಅಧ್ಯಕ್ಷ ಗದ್ದುಗೆ ಏರಿ ಬಿಜೆಪಿಗೆ ನಿರಾಸೆ ಮೂಡಿಸಿದ್ದರು.
2018ರಲ್ಲಿ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ನವಲಗುಂದ ತಾಲೂಕು ಪ್ರತಿನಿಧಿಸಿ ಬಾಪುಗೌಡ ಪಾಟೀಲ ಕೆಸಿಸಿ ಬ್ಯಾಂಕ್ಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆ ಆಗಿದ್ದರು. ಬಳಿಕ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿರ್ದೇಶಕರ ಸಹಕಾರದಿಂದ 2018ರ ನ. 9ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ನಡೆದ ಮಾತುಕತೆಯಂತೆ 30 ತಿಂಗಳ ಅವಧಿ ಬಳಿಕ ಮೇ 10ರಂದು ರಾಜೀನಾಮೆ ನೀಡಿದ್ದಾರೆ.
ಹೀಗಾಗಿ ಮುಂದಿನ 30 ತಿಂಗಳ ಅವಧಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಜೂ. 18ರಂದು ದಿನಾಂಕ ನಿಗದಿಪಡಿಸಲಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೇರಲು ಆಕಾಂಕ್ಷಿ ನಿರ್ದೇಶಕರು ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಜಿ.ಪಿ. ಪಾಟೀಲ ಹಾಗೂ ಬಿಜೆಪಿ ಬೆಂಬಲಿತ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಿ.ಪಿ. ಪಾಟೀಲ ಅವರು ಹಿರಿಯ ಸಹಕಾರಿ ಧುರೀಣರು ಆಗಿರುವುದರಿಂದ ಅವರತ್ತ ಹೆಚ್ಚಿನ ಒಲವಿದೆ. ಅಲ್ಲದೆ, ಇವರ ತಂದೆ ಪಿ.ಎಲ್. ಪಾಟೀಲ ಅವರು ಕೆಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಇನ್ನು ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಹೊರಕೇರಿ ಅವರಿಗೆ ಕೊನೆ ಕ್ಷಣದಲ್ಲಿ ಅಧಿಕಾರ ಕೈ ತಪ್ಪಿತ್ತು. ಹೀಗಾಗಿ, ಈ ಬಾರಿ ಹೇಗಾದರೂ ಅಧ್ಯಕ್ಷ ಸ್ಥಾನಕ್ಕೆ ಏರಲೇಬೇಕು ಎಂದು ಅವರು ಪ್ರಯತ್ನ ನಡೆಸಿದ್ದಾರೆ. ಪೈಪೋಟಿಯಲ್ಲಿರುವ ಆಕಾಂಕ್ಷಿಗಳನ್ನು ಬಿಟ್ಟು ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
--- ಬಾಕ್ಸ್ ---
ಅವಿರೋಧ ಆಯ್ಕೆಗೆ ಯತ್ನ
ನಿಯಮ ಪ್ರಕಾರ ಜೂ. 18ರಂದು ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಹಿರಿಯರು, ಎಲ್ಲ ನಿರ್ದೇಶಕರು ಜೂ. 17ರಂದು ಸಭೆ ನಡೆಸಲು ತೀರ್ವನಿಸಿದ್ದಾರೆ. ಈ ಸಭೆಯಲ್ಲಿ ಹಿರಿಯರ ಸಲಹೆ, ಸೂಚನೆ ಪಡೆದು ಒಮ್ಮತದ ಅಭ್ಯರ್ಥಿ ಹಾಗೂ ಅವಿರೋಧ ಆಯ್ಕೆ ಬಗ್ಗೆ ರ್ಚಚಿಸಲಿದ್ದಾರೆ. ಈ ಸಭೆ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನಲಾಗುತ್ತಿದೆ.
==========
16-ಕೆಎಲ್ಜಿ-1 ಚಿತ್ರ ಇದೆ:
ಕಲಘಟಗಿ ಪೊಲೀಸ್ ಠಾಣೆಯಿಂದ ಹೊರ ಬಂದ ಖಾಸನೀಸ್ ಸಹೋದರರು.
ಪೊಲೀಸ್ ಠಾಣೆಗೆ ಹಾಜರಿ ಹಾಕಿದ ಖಾಸನೀಸ್ ಸಹೋದರರು
ಎಚ್ಚೆತ್ತುಕೊಂಡ ಹಣ ಹೂಡಿಕೆದಾರರು
ಕಲಘಟಗಿ: ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ ಖಾಸನೀಸ್ ಸಹೋದರರಿಗೆ ಇತ್ತೀಚೆಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಕಲಘಟಗಿ ಪೊಲೀಸ್ ಠಾಣೆಗೆ ಮಂಗಳವಾರ ಆಗಮಿಸಿ ಹಾಜರಿ ಹಾಕಿದರು. ಹೀಗಾಗಿ, ತಮ್ಮ ಹಣ ಇನ್ನಾದರೂ ಕೈ ಸೇರುತ್ತದೆಯೋ, ಇಲ್ಲವೋ ಎಂಬ ಜಿಜ್ಞಾಸೆ ಹೂಡಿಕೆದಾರರಲ್ಲಿ ಮತ್ತೆ ಶುರುವಾಗಿದೆ.
ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಜನರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆಗೈದ ಕುರಿತು ಸಾರ್ವಜನಿಕರ ದೂರಿನನ್ವಯ ರಾಜ್ಯ ಸರ್ಕಾರ 2017ರಲ್ಲಿ ಮೂವರು ಖಾಸನೀಸ್ ಸಹೋದರರ ವಿರುದ್ಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಹಲವು ವರ್ಷಗಳಿಂದ ಕಲಘಟಗಿಯಲ್ಲಿ ಹರ್ಷ ಎಂಟರ್ಟೇನ್ವೆುಂಟ್ ಸಂಸ್ಥೆ ಸ್ಥಾಪಿಸಿ ರಾಜ್ಯಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಗ್ರಾಹಕರನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು ಎಂಬ ಆರೋಪ ಖಾಸನೀಸ್ ಸಹೋದರರ ಮೇಲಿದೆ.
ಖಾಸನೀಸ್ ಸಹೋದರರಿಗೆ ಇತ್ತೀಚೆಗಷ್ಟೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಠಾಣೆಯಲ್ಲಿ ಜಾಮೀನು ನೀಡಲು ಜನರು ಲಭ್ಯವಾಗುವಲ್ಲಿ ವಿಳಂಬವಾಗಿತ್ತು ಎನ್ನಲಾಗಿದೆ.
ಮಂಗಳವಾರ ಇಲ್ಲಿನ ಪೊಲೀಸ್ ಠಾಣೆಗೆ ಬಂದ ಹರ್ಷ ಉರ್ಫ್ ಸತ್ಯಬೋಧ ಖಾಸನೀಸ್, ಶ್ರೀಕಾಂತ, ಸಂಜೀವ ಖಾಸನೀಸ್ ಅವರನ್ನು ಹಲವು ಗ್ರಾಹಕರು ತಾವು ಹೂಡಿಕೆ ಮಾಡಿದ ಹಣದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಹರ್ಷ ಸಹೋದರರು ‘ನಮ್ಮ ಪ್ರಕರಣಕ್ಕೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ನಮ್ಮ ಬಳಿ ಹೂಡಿಕೆಯಾಗಿರುವ ಗ್ರಾಹಕರ ಹಣ ಅಂದಾಜು 65 ಕೋಟಿ ಮಾತ್ರ. ನಮ್ಮ ಮುಟ್ಟುಗೋಲಾದ ಆಸ್ತಿಯಿಂದ ಗ್ರಾಹಕರಿಗೆ ಹಣವನ್ನು ನೀಡುತ್ತೇವೆ. ಜನರು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೇವೆ ಎಂದು ಹೇಳುವುದು ಸರಿಯಲ್ಲ, ನಮ್ಮಲ್ಲಿ ದಾಖಲೆಗಳು ಇವೆ’ ಎಂದರು.
‘ಮತ್ತಷ್ಟು ಹಣವನ್ನು ಚಿತ್ರರಂಗಕ್ಕೆ ಹೂಡಿಕೆ ಮಾಡಿದ್ದು, ಚಿತ್ರಗಳ ನಿರ್ಮಾಣ ಕಾರ್ಯ ಮುಗಿದು ಬಿಡುಗಡೆಯಾದ ನಂತರ ಅದರಿಂದ ಬಂದ ಹಣವನ್ನು ಗ್ರಾಹಕರಿಗೆ ನೀಡುತ್ತೇವೆ. ಯಾರಿಗೂ ಮೋಸ ಮಾಡುವುದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ವಿಳಂಬವಾಗುತ್ತಿದೆ. ನಾವು ಎಲ್ಲಿಯೂ ಓಡಿ ಹೋಗುವುದಿಲ್ಲ, ಜಿಲ್ಲೆಯಲ್ಲಿಯೇ ಇರುತ್ತೇವೆ’ ಎಂದು ಹೇಳಿ ಹೊರಟು ಹೋದರು ಎಂದು ವಂಚನೆಗೊಳಗಾದ ಗ್ರಾಹಕರು ವಿಜಯವಾಣಿಗೆ ತಿಳಿಸಿದರು.
==========
ಕೋವಿಡ್ನಿಂದ ಸಾವನ್ನಪ್ಪಿದರ ಕುಟುಂಬಕ್ಕೆ ಜಿಲ್ಲಾಡಳಿತದ ನೆರವಿನಹಸ್ತ
ಮನೆಬಾಗಿಲಿಗೇ ಮರಣ ಪ್ರಮಾಣಪತ್ರ
ವಿಕ್ರಮ ನಾಡಿಗೇರ ಧಾರವಾಡ
ಮಹಾಮಾರಿ ಕರೊನಾದಿಂದ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅವರ ಮರಣ ಪ್ರಮಾಣ ಪತ್ರ, ಇತರ ಸರ್ಕಾರಿ ಸೌಲಭ್ಯಗಳನ್ನು ಮನೆ ಬಾಗಿಲಿಗೇ ತಲುಪಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.
ಕರೊನಾದಿಂದ ಮೃತಪಟ್ಟವರ ಕುಟುಂಬಸ್ಥರ ನೋವು ಅರಿತು ಈ ಪ್ರಯೋಗಕ್ಕೆ ನಾಂದಿ ಹಾಡಿದೆ. ಮೊದಲೇ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವವರು ಮರಣ ಪ್ರಮಾಣಪತ್ರಕ್ಕೆ ಕಚೇರಿ ಕಚೇರಿ ಎಡತಾಕುವುದನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ (ಜೂ.15) 1088 ಜನ ಕರೊನಾದಿಂದ ಮೃತಪಟ್ಟಿದ್ದಾರೆ. ಇವರ ಕುಟುಂಬಸ್ಥರು ಲಾಕ್ಡೌನ್ ಅವಧಿಯಲ್ಲಿ ಓಡಾಟ ನಡೆಸುವುದು ಕಷ್ಟ. ಇದೇ ಕಾರಣಕ್ಕೆ ನಗರದ ಪ್ರದೇಶದಲ್ಲಿ ಪಾಲಿಕೆ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಕಾಲ ಮಿತಿಯಲ್ಲಿ ಮರಣ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ.
ಮೃತಪಟ್ಟವರ ಪೈಕಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 382 ಜನರಿದ್ದು, ಈಗಾಗಲೇ 266 ಜನರ ಪ್ರಮಾಣಪತ್ರ ಸಿದ್ಧವಾಗಿ ಕೆಲವನ್ನು ವಿತರಿಸಲಾಗಿದೆ. ಉಳಿದ 116 ಪ್ರಮಾಣಪತ್ರಗಳು ಶೀಘ್ರ ಸಿದ್ಧವಾಗಲಿವೆ. ಈ ದಾಖಲೆ ಸಿದ್ಧವಾದ ಬಳಿಕ ಸಂಬಂಧಿಕರಿಗೆ ಫೋನ್ ಕರೆ ಮೂಲಕ ಮಾಹಿತಿ ನೀಡಲಾಗುವುದು. ಹತ್ತಿರ ಇದ್ದರೆ ಅವರೇ ಬಂದು ಒಯ್ಯಲಿದ್ದಾರೆ. ಇಲ್ಲವಾದಲ್ಲಿ ಪಾಲಿಕೆ ಸಿಬ್ಬಂದಿ ಮನೆಗಳಿಗೆ ತಲುಪಿಸಲಿದ್ದಾರೆ.
ಆಸ್ಪತ್ರೆಗಳಲ್ಲಿ ಮೃತಪಟ್ಟವರ ಮಾಹಿತಿಗಳನ್ನು ಪಡೆದು ಮರಣ ಪ್ರಮಾಣಪತ್ರ ಸಿದ್ಧಪಡಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ನಿಂದ ಮೃತಪಟ್ಟವರ (ಜ.1ರಿಂದ) ಮಾಹಿತಿ ಜತೆಗೆ ನಾನ್ ಕೋವಿಡ್ನಿಂದ ಮೃತಪಟ್ಟವರ ಮಾಹಿತಿಯೂ ಸಂಗ್ರಹಿಸಲಾಗುತ್ತಿದೆ. ಮರಣ ಪ್ರಮಾಣಪತ್ರ ಮಾತ್ರವಲ್ಲದೆ, ಅಂತ್ಯಸಂಸ್ಕಾರದ ವೆಚ್ಚ, ವಿಧವಾ ವೇತನ, ಸೋಷಿಯಲ್ ಸೆಕ್ಯುರಿಟಿ ಸ್ಕೀಂ, ವಾರಸಾ ಮುಂತಾದ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಸ್ವಯಂ ಪ್ರೇರಿತ ಅರ್ಜಿ ಸ್ವೀಕರಿಸುವ ಕೆಲಸ ನಡೆದಿದೆ.
ಸಾಮಾನ್ಯ ದಿನಗಳಲ್ಲಿ ಒಂದೇ ಕೆಲಸಕ್ಕೆ ಪದೇಪದೆ ಕಚೇರಿಗಳಿಗೆ ಎಡತಾಕುವ ಸ್ಥಿತಿ ಇದೆ. ಆದರೆ, ಕೋವಿಡ್ ಸಂದರ್ಭದಲ್ಲಿ ಇಂತಹ ಸ್ಥಿತಿ ನಿರ್ವಣವಾಗಲು ಅವಕಾಶ ನೀಡಿದೆ ಪಾಲಿಕೆ ಅಧಿಕಾರಿಗಳೇ ಮರಣ ಪ್ರಮಾಣಪತ್ರಗಳನ್ನು ಮನೆ ಬಾಗಲಿಗೆ ತಲುಪಿಸಲು ಮುಂದಾಗಿರುವ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
---ಕೋಟ್---
ಮರಣಪ್ರಮಾಣದ ಜತೆಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ನಡೆದಿದೆ. ಕೋವಿಡ್ನಿಂದ ಮೃತಪಟ್ಟವರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
| ಡಾ. ಸಂತೋಷ ಬಿರಾದಾರ
ತಹಸೀಲ್ದಾರ್
----ಕೋಟ್----
ಬೇಗನೆ ಮರಣ ಪ್ರಮಾಣಪತ್ರ ಸಿಗಲಿ ಎಂಬ ಕಾರಣಕ್ಕೆ ಈ ಪ್ರಯೋಗ. ಈಗಾಗಲೇ ಕೆಲವರಿಗೆ ಪ್ರಮಾಣಪತ್ರ ವಿತರಿಸಲಾಗಿದೆ. ಇನ್ನೂ ಕೆಲ ಪ್ರಮಾಣಪತ್ರಗಳು ಸಿದ್ಧವಾಗಿವೆ. ಕಂದಾಯ ಇಲಾಖೆ, ಪಾಲಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬ್ಯಾಂಕರ್ ಸೇರಿ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
| ಸುರೇಶ ಇಟ್ನಾಳ
ಮಹಾನಗರ ಪಾಲಿಕೆ ಆಯುಕ್ತ
==========
ಎಚ್16 ಕೇಶವ್ 1
ಫೋಟೋ: ಎಚ್16 ಸೇವಾ ಭಾರತಿ 1
ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ ಮಾಲೀಕ ಗೋಪಾಲಕೃಷ್ಣ ನಾಯಕ ಅವರು ಆರ್ಎಸ್ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರ ಮೂಲಕ ಸೇವಾ ಭಾರತಿ ಟ್ರಸ್ಟ್ಗೆ ಆಂಬುಲೆನ್ಸ್ ಕೀಲಿ ಹಸ್ತಾಂತರಿಸಿದರು. ಪ್ರಮುಖರಾದ ಶ್ರೀಧರ ನಾಡಿಗೇರ, ನರೇಂದ್ರ, ರಘು ಅಕಮಂಚಿ, ಗೋವರ್ಧನರಾವ್, ಸಂದೀಪ ಬೂದಿಹಾಳ, ಜಯತೀರ್ಥ ಕಟ್ಟಿ, ಇತರರು ಇದ್ದರು.
==========
ಸೇವಾ ಭಾರತಿಯಿಂದ ಸಾಮಾಜಿಕ ಕಾರ್ಯ
ಸೇವಾ ಭಾರತಿಯಿಂದ ಸಾಮಾಜಿಕ ಕಾರ್ಯ
ಹುಬ್ಬಳ್ಳಿ: ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ನ 20ನೇ ವಾರ್ಷಿಕೋತ್ಸವದ ಅಂಗವಾಗಿ ಮಾಲೀಕ ಗೋಪಾಲಕೃಷ್ಣ ನಾಯಕ ಅವರು 14.5 ಲಕ್ಷ ರೂ. ಬೆಲೆಯ ಸುಸಜ್ಜಿತ ಆಂಬುಲೆನ್ಸ್ಅನ್ನು ಬುಧವಾರ ಇಲ್ಲಿ ಸೇವಾ ಭಾರತಿ ಸಂಸ್ಥೆಗೆ ಕೊಡುಗೆಯಾಗಿ ನೀಡಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ಸೇವಾ ಭಾರತಿ ವತಿಯಿಂದ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಆವರಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವ ಸಂಘದ (ಆರ್ಎಸ್ಎಸ್) ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರ ಮೂಲಕ ಆಂಬುಲೆನ್ಸ್ ಕೀಲಿ ಹಸ್ತಾಂತರಿಸಲಾಯಿತು.
ನಂತರ ಮಾತನಾಡಿದ ಮಂಗೇಶ ಭೇಂಡೆ, ಸೇವಾ ಭಾರತಿ 20 ವರ್ಷಗಳಿಂದ ರಾಜ್ಯದಲ್ಲಿ ವಿಶೇಷ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಕರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಸೇವಾ ಕಾರ್ಯ ನಡೆಸುತ್ತಿದೆ. ಇದು ಸಮಾಜದಿಂದ ನಡೆಯುವ ಸಂಸ್ಥೆ. ಇನ್ನೂ ಅನೇಕ ಸೇವಾ ಚಟುವಟಿಕೆಗಳು ನಡೆಯಬೇಕಿವೆ. ಯಾರು ಸಂಕಟದಲ್ಲಿದ್ದಾರೆ ಅವರ ದುಃಖ ದೂರ ಮಾಡುವ ಕೆಲಸ ಆಗಬೇಕಿದೆ ಎಂದರು.
ಆಂಬುಲೆನ್ಸ್ ಎಷ್ಟು ಕಡಿಮೆ ಬಳಕೆಯಾಗುತ್ತದೋ ಸಮಾಜ ಅಷ್ಟು ಸ್ವಸ್ಥವಾಗಿದೆ ಎಂದು ಅರ್ಥ. ಎಷ್ಟು ರೋಗಿಗಳು ಇದರಲ್ಲಿ ಹೋದರು ಎಂಬುದಕ್ಕಿಂತ ಎಷ್ಟು ಕಡಿಮೆ ಉಪಯೋಗ ಆಯಿತು ಎಂಬುದು ಮುಖ್ಯ. ಯಾರಿಗೆ ತುರ್ತು ಇದೆಯೋ ಅವರಿಗಾಗಿ 24/7 ಸೇವೆ ಲಭಿಸಲಿದೆ ಎಂದರು.
ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ ಮಾಲೀಕ ಗೋಪಾಲಕೃಷ್ಣ ನಾಯಕ ಮಾತನಾಡಿ, ಸಮಾಜ ನಮ್ಮನ್ನು ಗುರುತಿಸುವ ಮಟ್ಟಿಗೆ ಸಂಘವು ಬೆಳೆಸಿದೆ. ಅದಕ್ಕೆ ಕೃತಜ್ಞತೆಯ ಒಂದು ಭಾಗವಾಗಿ ಸಂತೋಷದಿಂದ ಈ ವಾಹನವನ್ನು ಸೇವಾ ಭಾರತಿ ಸಂಸ್ಥೆಗೆ ನೀಡುತ್ತಿದ್ದೇವೆ. ಇದರ ಸೇವೆ ಸಮಾಜಕ್ಕೆ ಒದಗಲಿ ಎಂದರು.
ಸಂಘದ ಹಿರಿಯ ಪರಚಾರಕ ಶ್ರೀಧರ ನಾಡಿಗೇರ, ಉತ್ತರ ಪ್ರಾಂತ ಪ್ರಚಾರಕ ನರೇಂದ್ರ, ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಡಾ. ರಘು ಅಕಮಂಚಿ, ಗೋವರ್ಧನರಾವ್, ಸಂದೀಪ ಬೂದಿಹಾಳ, ದತ್ತಮೂರ್ತಿ ಕುಲಕರ್ಣಿ, ಜಯತೀರ್ಥ ಕಟ್ಟಿ, ಉಮೇಶ ದುಶಿ, ಚಂದ್ರಶೇಖರ ಗೋಕಾಕ, ರವಿ ದಂಡಿನ, ರಾಚಯ್ಯ ವಾರಿಕಲ್ಮಠ, ಹರೀಶ ಶೆಣೈ, ಶಂಕರ ಗುಮಾಸ್ತೆ, ಶಿವಯ್ಯ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.
ಬಾಕ್ಸ್...........................
ಧರ್ಮಸ್ಥಳದ ಅನ್ನದಾಸೋಹಕ್ಕೆ ಪ್ರೇರಣೆ
ಸೇವಾ ಭಾರತಿಯ ಟ್ರಸ್ಟಿಯೂ ಆಗಿರುವ ಸ್ವರ್ಣ ಜುವೆಲರ್ಸ್ ಮಾಲೀಕ ಗೋಪಾಲಕೃಷ್ಣ ನಾಯಕರ ಉಡುಪಿಯ ನಿವಾಸ ಸಂಘದ ಮನೆ. ಸೇವಾ ಮನೋಭಾವ ಇವರ ಮನೆತನದಲ್ಲೇ ಇದೆ. ಧರ್ಮಸ್ಥಳದ ಅನ್ನದಾಸೋಹದ ಮೂಲ ಕಲ್ಪನೆ ಕೊಟ್ಟಿದ್ದೇ ಇವರ ಕುಟುಂಬ. ಹಿಂದೆಲ್ಲ ಮಂಜುನಾಥಸ್ವಾಮಿ ಸನ್ನಿಧಿಗೆ ಬಂದವರಿಗೆ ರೇಶನ್ ಕೊಟ್ಟು, ‘ನಿಮ್ಮ ಅಡುಗೆಯನ್ನು ನೀವೇ ಮಾಡಿ ಊಟ ಮಾಡಿಕೊಂಡು ಹೋಗಿ’ ಎಂದು ಹೇಳುತ್ತಿದ್ದರು. ಗೋಪಾಲಕೃಷ್ಣ ನಾಯಕರ ತಂದೆಯವರು ವೀರೇಂದ್ರ ಹೆಗ್ಗಡೆ ಅವರ ತಂದೆಯವರಿಗೆ ಪ್ರೇರಣೆ ಕೊಟ್ಟರು. ಬಳಿಕ ಧರ್ಮಸ್ಥಳದಲ್ಲಿ ಅನ್ನದಾಸೋಹದ ವ್ಯವಸ್ಥೆ ಪ್ರಾರಂಭವಾಯಿತು ಎಂದು ಮಂಗೇಶ ಭೇಂಡೆ ಸ್ಮರಿಸಿದರು.
===========
16 ಡಿಡಬ್ಲುಡಿ 3
ಫೋಟೊ 16 ಡಿಡಬ್ಲುಡಿ 3
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯಲ್ಲಿ ಅಪೌಷ್ಟಿಕ ಮಗುವಿನ ಪೋಷಣೆ.
ಫೋಟೊ 16 ಡಿಡಬ್ಲುಡಿ 3ಎ
ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಅಪೌಷ್ಟಿಕ ಮಕ್ಕಳ ಪೋಷಣೆ.
ಫೋಟೊ 16 ಡಿಡಬ್ಲುಡಿ 3ಬಿ
ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ಊಟ.
(ವಿಜಯವಾಣಿ ವಿಶೇಷ)
* ಜಿಲ್ಲೆಯಲ್ಲಿ 15,548 ಸಾಧಾರಣ, 75 ತೀವ್ರ ಮಕ್ಕಳ ಪತ್ತೆ * 3ನೇ ಅಲೆ ಮುನ್ನೆಚ್ಚರಿಕೆಯಾಗಿ ಮನೆಮನೆಗೆ ತೆರಳಿ ಊಟೋಪಚಾರ
ಪೌಷ್ಟಿಕರಹಿತರಿಗೆ ಅಂಗನವಾಡಿ ಅಮ್ಮಂದಿರ ಕೈತುತ್ತು
ಮಂಜುನಾಥ ಅಂಗಡಿ ಧಾರವಾಡ
ಕರೊನಾ 2ನೇ ಅಲೆಯ ಅಬ್ಬರ ಈಗಷ್ಟೇ ಕೊಂಚ ತಗ್ಗಿದೆ. ಈ ನಡುವೆಯೇ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ, ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕಾದ ಅನಿವಾರ್ಯತೆ ಇದ್ದು, ಅದರಲ್ಲೂ ಅಪೌಷ್ಟಿಕ ಮಕ್ಕಳ ಆರೋಗ್ಯದತ್ತ ನಿಗಾ ವಹಿಸುವುದು ಅಗತ್ಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯೋನ್ಮುಖವಾಗಿದೆ.
ಅಪೌಷ್ಟಿಕತೆಯು ಮಕ್ಕಳ ಬೆಳವಣಿಗೆಗೆ ಶಾಪವಾಗಿ ಪರಿಣಮಿಸಿದೆ. ಕರೊನಾದಂಥ ಕಠಿಣ ಸಂದರ್ಭದಲ್ಲಿ 20 ವರ್ಷಕ್ಕೂ ಮೇಲ್ಪಟ್ಟವರು ಕೋವಿಡ್ಗೆ ಬಲಿಯಾಗಿರುವ ನಿದರ್ಶನಗಳಿವೆ. ಮುಂದಿನ ದಿನಗಳಲ್ಲಿ 18 ವರ್ಷದೊಳಗಿನವರಿಗೂ ಕೋವಿಡ್ ಬಾಧೆಯ ತೂಗುಗತ್ತಿ ನೇತಾಡುತ್ತಿದೆ. ವಿಶೇಷವಾಗಿ ಅಪೌಷ್ಟಿಕ ಮಕ್ಕಳತ್ತ ವಿಶೇಷ ಗಮನ ಹರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಲಾಕ್ಡೌನ್ನಂಥ ಕಠಿಣ ಸಂದರ್ಭದಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
2020ರ ಡಿಸೆಂಬರ್ನಲ್ಲಿ ಜಿಲ್ಲೆಯಲ್ಲಿ 19,000 ಸಾಧಾರಣ ಹಾಗೂ 224 ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿತ್ತು. ಸೆಮಿಲಾಕ್ಡೌನ್ನಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಇಂಥ ಮಕ್ಕಳ ಮನೆಮನೆಗೆ ತೆರಳಿ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ವಯಸ್ಸಿಗೆ ಅನುಗುಣವಾಗಿ ಪೋಷಕಾಂಶಯುಕ್ತ ರವೆ ಉಂಡಿ, ಶೇಂಗಾ ಉಂಡಿ, ಬಾಳೆಹಣ್ಣು, ಮೊಟ್ಟೆಗಳನ್ನು ನೀಡಲಾಗುತ್ತಿದೆ. ಪೋಷಕರ ಬದಲು ಅಂಗನವಾಗಿ ಅಮ್ಮಂದಿರೇ ಕೈತುತ್ತು ನೀಡಿ ಉಣಬಡಿಸುತ್ತಿದ್ದಾರೆ.
* ತೀವ್ರ ಅಪೌಷ್ಟಿಕ ಮಕ್ಕಳು 75:
ಆರು ವರ್ಷದೊಳಗಿನ ಸಾಮಾನ್ಯ ಮಕ್ಕಳಿಗಿಂತ ತೆಳ್ಳಗೆ ಇರುವ, ಬೆಳವಣಿಗೆ ಕಾಣದ ಮತ್ತು ಪದೇಪದೆ ಆರೋಗ್ಯ ಸಮಸ್ಯೆಗೆ ತುತ್ತಾಗುವ, ಕಡಿಮೆ ತೂಕ, ಕುಬ್ಜತೆ, ಬೆಳವಣಿಗೆಯಲ್ಲಿ ಕುಂಠಿತ, ಕಡಿಮೆ ಆಹಾರ ಸೇವನೆ ಮಾಡುವ, ನಿಷ್ಕ್ರಿಯ ಹಾಗೂ ಆಟ- ಪಾಠಗಳಲ್ಲಿ ಹಿನ್ನಡೆ ಇರುವವರನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಲಾಗುತ್ತದೆ. ಸದ್ಯ ಜಿಲ್ಲೆಯಲ್ಲಿ 6 ವರ್ಷದೊಳಗಿನ ಸಾಧಾರಣ 15,548 ಹಾಗೂ ತೀವ್ರ ಅಪೌಷ್ಟಿಕತೆಯ 75 ಮಕ್ಕಳನ್ನು ಗುರುತಿಸಲಾಗಿದೆ. ಹಿಂದಿನ ಅಂಕಿ- ಅಂಶಗಳನ್ನು ಅವಲೋಕಿಸಿದಾಗ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
* ಕಾರಣಗಳು ಹಲವು
ಗರ್ಭಿಣಿಯರಿದ್ದಾಗ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದಿರುವುದು, ಗರ್ಭಾವಸ್ಥೆಯಲ್ಲಿ ಸಮಪರ್ಕ ವೈದ್ಯಕೀಯ ಚಿಕಿತ್ಸೆ ಪಡೆಯದಿರುವುದು, ಪೋಷಕಾಂಶಗಳ ಕೊರತೆನ ಇರುವುದು, ಜನಿಸುವ ಮಕ್ಕಳ ಮಧ್ಯೆ ಅಂತರವಿಲ್ಲದಿರುವುದು, ಕೊಳಚೆ ಪ್ರದೇಶದಲ್ಲಿರುವುದು, ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದು, ಬಡತನ ಮುಂತಾದ ಕಾರಣಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತದೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಭಾಗದಲ್ಲೇ ಅಪೌಷ್ಟಿಕ ಮಕ್ಕಳು ಹೆಚ್ಚಾಗಿದ್ದಾರೆ. ನಗರಗಳ ಕೊಳಚೆ ಪ್ರದೇಶ, ತಂದೆ- ತಾಯಿಗೆ ದುಡಿಯುವ ಅನಿವಾರ್ಯತೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲದಿರುವುದು ಮೊದಲಾದ ಕಾರಣಗಳಿಂದಾಗಿ ಹೀಗಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
--- ಬಾಕ್ಸ್ ---
ನ್ಯೂಟ್ರಿಶನ್ ರಿಹ್ಯಾಬಿಲಿಟೇಶನ್ ಸೆಂಟರ್
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ಮನೆಮನೆಗೆ ಭೇಟಿ ನೀಡಿ ಮಕ್ಕಳ ತೂಕ ತಪಾಸಣೆ ಮಾಡಿ ಪತ್ತೆ ಹಚ್ಚುತ್ತಾರೆ. ತೀವ್ರ ಅಪೌಷ್ಟಿಕತೆ ಕಾಣಿಸಿದ್ದರೆ ಎನ್ಆರ್ಸಿಗೆ (ನ್ಯೂಟ್ರಿಶನ್ ರಿಹ್ಯಾಬಿಲಿಟೇಶನ್ ಸೆಂಟರ್) ದಾಖಲಿಸಲಾಗುತ್ತದೆ. ಇಲ್ಲಿ ಮಗುವಿನೊಂದಿಗೆ ತಾಯಿಗೂ ಇರಲು ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಹುಬ್ಬಳ್ಳಿಯ ಕಿಮ್್ಸ, ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ನವಲಗುಂದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಎನ್ಆರ್ಸಿಗಳಿವೆ. ಲಾಕ್ಡೌನ್ ಆರಂಭವಾದಾಗಿನಿಂದ ಎನ್ಆರ್ಸಿಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾ.ಪಂ. ಸದಸ್ಯರು ಪೋಷಕಾಂಶಯುಕ್ತ ಊಟ, ಮಾತ್ರೆ ನೀಡಲಾಗುತ್ತಿದೆ.
--- ಕೋಟ್ ---
ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಸದ್ಯ ಜಿಲ್ಲೆಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮಕ್ಕಳ ಪೋಷಣೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಸ್ವತಃ ಊಟೋಪಚಾರ ಮಾಡುತ್ತಿದ್ದಾರೆ. ಸಾಮಾನ್ಯ ಮಕ್ಕಳಿಗೆ ವಾರಕ್ಕೆ 3 ದಿನ ಮೊಟ್ಟೆ ನೀಡಿದರೆ, ಅಪೌಷ್ಟಿಕ ಮಕ್ಕಳಿಗೆ 6 ಮೊಟ್ಟೆಗಳನ್ನು ನೀಡಲಾಗುತ್ತಿದೆ.
| ಭಾರತಿ ಶೆಟ್ಟರ್, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ
============