ಸಂವಿಧಾನದ ರಕ್ಷಣೆ ಬಗ್ಗೆ ಈಗ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ನ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ನಮಗೆ ಮೂಗ ಅಥವಾ ಮೂಕ ಸಿದ್ದರಾಮಯ್ಯ ಬೇಡ, ತುರ್ತು ಪರಿಸ್ಥಿತಿ ವೇಳೆ ಎಲ್ಲಿ ಹೋಗಿದ್ದಿರಿ ಎಂದು ಹೇಳಬೇಕು. ಅದನ್ನು ಕೇಳಲೇ ನಾನು ಮೈಸೂರಿಗೆ ಬಂದಿರುವುದು ಎಂದು ಸವಾಲು ಹಾಕಿದರು.
ಮೈಸೂರಿನಲ್ಲಿ ಸಾಕಷ್ಟು ಮಂದಿ ಪ್ರಗತಿಪರರು ಇದ್ದಾರೆ. ಬೆಂಗಳೂರಿನಲ್ಲಂತೂ ತುಂಬಾ ಜನ ಇದ್ದಾರೆ. ಈಗ ಸಂವಿಧಾನ ರಕ್ಷಣೆಯಾಗಬೇಕು ಎಂದು ಹೇಳುತ್ತಿರುವ ಪ್ರಗತಿಪರರು ತುರ್ತು ಪರಿಸ್ಥಿತಿ ವೇಳೆ ಎಲ್ಲಿ ಹೋಗಿದ್ದರು. ಏಕೆ ಧ್ವನಿ ಎತ್ತಲಿಲ್ಲ. ಏನು ಮಣ್ಣು ತಿನ್ನುತ್ತಿದ್ದರೆ ಎಂದು ಕಿಡಿಕಾರಿದರು.
ತುರ್ತು ಪರಿಸ್ಥಿಯ ಕರಾಳ ದಿನಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಇಂಡಿಯಾ ಎಂದರೆ ಇಂದಿರಾ ಎನ್ನುವಂತೆ ಕಾಂಗ್ರೆಸ್ ನಾಯಕರು ಮಾಡಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ನಾಯಕರನ್ನು ಜೈಲಿಗಟ್ಟಲಾಗಿತ್ತು. ಆ ವೇಳೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ನಮ್ಮನ್ನು ದೇಶದಿಂದಲೇ ಗಡಿಪಾರು ಮಾಡುತ್ತಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಗೋ.ಮಧುಸೂದನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಎಲ್.ನಾಗೇಂದ್ರ, ಮುಖಂಡರಾದ ಡಾ.ಅನಿಲ್ ಥಾಮಸ್, ಹೇಮಾ ನಂದೀಶ್, ಕೇಬಲ್ ಮಹೇಶ್, ಶೈಲೇಂದ್ರ, ಸೋಮಸುಂದರ್, ಮೈ.ಪು.ರಾಜೇಶ್, ಗೋಕುಲ್ ಗೋವರ್ಧನ್, ಪುನೀತ್ ಇದ್ದರು.