ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸೋಮವಾರ ತಿರುಪತಿಯ ತಿಮ್ಮಪ್ಪನ ದೇವಸ್ಥಾನಕ್ಕೆ ಎರಡು ಬೃಹತ್ ಬೆಳ್ಳಿ ದೀಪಗಳನ್ನು(ಅಖಂಡ ದೀಪಗಳು) ಕಾಣಿಕೆಯಾಗಿ ನೀಡಿದ್ದಾರೆ.
ಪ್ರತಿ ಬೆಳ್ಳಿ ದೀಪ ಸುಮಾರು 50 ಕೆ.ಜಿ. ತೂಕ ಇದೆ. ಎರಡೂ ದೀಪಗಳು ಸೇರಿ ಒಂದು ಕ್ವಿಂಟಾಲ್ ತೂಗುತ್ತವೆ. ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಮತ್ತು ದೇವಾಲಯದ ಅಧಿಕಾರಿಗಳು ರಂಗನಾಯಕುಲ ಮಂಟಪದಲ್ಲಿ ಬೆಳ್ಳಿ ದೀಪಗಳನ್ನು ಪ್ರಮೋದಾದೇವಿ ಒಡೆಯರ್ ಅವರಿಂದ ಸ್ವೀಕರಿಸಿದರು.
ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳ್ಳಿ ದೀಪಗಳನ್ನು ಬೆಳಗಿಸುವುದು ಸಂಪ್ರದಾಯ. ಸುಮಾರು 300 ವರ್ಷಗಳ ಹಿಂದೆ ಅಂದಿನ ಮೈಸೂರು ಮಹಾರಾಜರು ಬೃಹತ್ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು. ಅವುಗಳನ್ನು ಗರ್ಭಗುಡಿಯಲ್ಲಿ ಬೆಳಗಿಸಲಾಗುತ್ತಿದೆ. ಮೂರು ಶತಮಾನಗಳ ನಂತರ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮತ್ತೊಮ್ಮೆ ಬೆಳ್ಳಿ ದೀಪಗಳನ್ನು ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.
ಪ್ರಮೋದಾದೇವಿ ಒಡೆಯರ್ ಪುತ್ರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇತರರಿದ್ದರು.