ಸರಗೂರು : ತಾಲೂಕು ಹಂಚೀಪುರ ಗ್ರಾಮದ ಬಳಿ ಉದ್ದೇಶಿತ 100 ಬೆಡ್ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆ ಶೀಘ್ರವೇ ನಿರ್ಮಾಣವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಹೇಳಿದರು.
ಅವರು ಕಂದಾಯ, ಸರ್ವೇ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖ ಶುಕ್ರವಾರ ಉದ್ದೇಶಿತ ಆಸ್ಪತ್ರೆಯ ಜಾಗದಲ್ಲಿ ಹದ್ದುಬಸ್ತು ಗುರುತು ಪರಿಶೀಲಿಸಿದ ನಂತರ ಮಾತನಾಡಿದರು.
ಶಾಸಕ ಅನಿಲ್ ಚಿಕ್ಕಮಾದು ಸಹಕಾರ ಮತ್ತು ಆಸಕ್ತಿಯಿಂದ ಸರ್ಕಾರ ಮಟ್ಟದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಕೆಲಸಗಳು ಸುಗಮವಾಗಿ ನಡೆದಿವೆ. ತಾಲೂಕಿನ ಕಾಡಂಚಿನ ಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ದೊರಕುತ್ತಿದೆ. ಆರೋಗ್ಯ ಸೇವೆಗೂ ಇದು ಸಹಕಾರಿಯಾಗಿದೆ ಎಂದರು. ಶಾಸಕರ ಆಪ್ತ ಸಹಾಯಕ ಮಂಜುನಾಥ ಮಾತನಾಡಿ, ಕಾಡಂಚಿನ ಪ್ರದೇಶದ ಜನರಿಗೆ ರಸ್ತೆ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಅಗತ್ಯ ಸೌಲಭ್ಯ ದೊರಕಬೇಕು. ಈ ನಿಟ್ಟಿನಲ್ಲಿ ಸಮುದಾಯಗಳ ಆರೋಗ್ಯ ಸೇವೆಗೆ ಶಾಸಕರು ಮುಂದಾಗಿದ್ದಾರೆ. ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ತಾಲೂಕು ಕೇಂದ್ರ ಘೋಷಣೆ ಆದ ನಂತರ ಮೊದಲ ಬಾರಿಗೆ 42 ಕೋಟಿ ರೂ. ವೆಚ್ಚದ 100 ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದೆ. ನಿವೇಶನದ ಸಮಸ್ಯೆದಿಂದ
ಕಾಮಗಾರಿ ತಡವಾಗಿತ್ತು. ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಹಂಚೀಪುರ ಗ್ರಾಮದ ಬಳಿ ಕಂದಾಯ ಇಲಾಖೆ ಜಾಗ ಗುರುತಿಸಿದೆ. ದಾಖಲೆಗಳೆಲ್ಲ ಸುಮಗವಾಗಿದೆ. ಹದ್ದುಬಸ್ತು ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಸ್ಪತ್ರೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಶಾಸಕರಿಂದ ಚಾಲನೆಗೊಳ್ಳಲಿದೆ ಎಂದರು. ಕಂದಾಯ ಇಲಾಖೆ ನಿರೀಕ್ಷಕ ರವಿಚಂದ್ರನ್, ಸರ್ವೆ ಇಲಾಖೆ ಅಧಿಕಾರಿ ನಾಗರಾಜು,ಗ್ರಾಮ ಲೆಕ್ಕಿಗ ಸತ್ಯನಾರಾಯಣ, ಗ್ರಾಮ ಸಹಾಯಕ ರಾಜು, ವಿವಿಧ ಇಲಾಖೆ ಸಿಬ್ಬಂದಿ ಸಿದ್ದರಾಜು, ಶಿವರಾಜು ಇತರರು ಇದ್ದರು.