ಪಿರಿಯಾಪಟ್ಟಣ: ದಲಿತರ ಸಮಸ್ಯೆಗಳನ್ನು ಬಗೆಹರಿಸದ ತಾಲೂಕು ಆಡಳಿತದ ನಿರ್ಲಕ್ಷೃದ ವಿರುದ್ಧ ಮತದಾನ ಬಹಿಷ್ಕಾರ ಮಾಡುವುದಾಗಿ ಬುಧವಾರ ವಿವಿಧ ದಲಿತ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ದೊಡ್ಡಯ್ಯ ಮಾತನಾಡಿ, ಪಿರಿಯಾಪಟ್ಟಣ ತಾಲೂಕು ಆಡಳಿತ ಭವನದ ಎದುರು ಕಳೆದ ಒಂದು ವರ್ಷದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ನಮ್ಮ ಪ್ರತಿಭಟನೆ ನಿರಂತರವಾಗಿದ್ದು ಮಾರ್ಚ್ ತಿಂಗಳಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದ್ದೇವೆ.ಆದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ದೂರಿದರು.
ಹಿರಿಯ ಅಧಿಕಾರಿಗಳು ಬಂದಾಗ ಅನೇಕ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಂಡರೂ ಯಾವುದೇ ಕ್ರಮವಹಿಸದ ಹಿಂದಿನ ತಹಸೀಲ್ದಾರ್ ಕೆ.ಚಂದ್ರಮೌಳಿ, ಇಒ ಕೃಷ್ಣಕುಮಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ ಅವರ ನಡೆಯಿಂದ ಬೇಸತ್ತಿದ್ದು ಸಮಸ್ಯೆಗಳನ್ನು ಬಗೆಹರಿಸದ ಕಾರಣ ನಾವು ಮತ್ತು ನಮ್ಮ ಕುಟುಂಬದವರು ಈ ಬಾರಿ ವಿಧಾನಸಭೆಯ ಮತದಾನದಿಂದ ದೂರ ಉಳಿಯುವುದಾಗಿ ರಾಜ್ಯಪಾಲರಿಗೆ, ತಹಸಿಲ್ದಾರ್ ಕುಂಞ ಅಹಮ್ಮದ್ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಕುಂಞ ಅಹಮ್ಮದ್, ಮುಮ್ಮಡಿಕಾವಲು ಸೇರಿದಂತೆ ಮತ್ತಿತರ ಕಡೆ ಸರ್ವೇಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಇದುವರೆಗೂ ಏಕೆ ಪತ್ರ ಬರೆದಿಲ್ಲ ಎಂದು ಶಿರಸ್ತೇದಾರ್ ನಂದಕುಮಾರ್ ಮತ್ತು ಸಿಬ್ಬಂದಿಯನ್ನು ಎಲ್ಲರೆದುರು ತರಾಟೆಗೆ ತೆಗೆದುಕೊಂಡರಲ್ಲದೆ ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ದಲಿತ ಮುಖಂಡರಾದ ಸಿ.ಎಸ್.ಜಗದೀಶ್, ಗಂಗಾಧರ್, ಸಣ್ಣಯ್ಯ, ಕೃಷ್ಣಮೂರ್ತಿ, ಶಿವಣ್ಣ, ದೇವರಾಜು, ಮಹದೇವ್, ಕೃಷ್ಣ, ಸಾವಿತ್ರಮ್ಮ, ಚನ್ನಯ್ಯ ಭಾಗವಹಿಸಿದ್ದರು.