ನ್ಯೂಸ್

ತಾಲೂಕು ಅಭಿವೃದ್ಧಿ ಆಗಬೇಕಾದರೆ ಯುವ ಜನತೆ ಪಾತ್ರ ಮುಖ್ಯ

ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಗಣ್ಯರು ಚಾಲನೆ ನೀಡಿದರು. ವಿಶ್ವನಾಥ್ ಶೆಷಾಚಲ, ಭರತ್‌ರಾಜ್, ಸುಹಾಸಿನಿ ದಿನೇಶ್, ಬಸವರಾಜಪ್ಪ, ಮನುಗನಹಳ್ಳಿ ಮಾದಪ್ಪ, ಗಣೇಶ್ವಾರ್, ಶ್ರುತಿ ವಿಶ್ವನಾಥ್ ಇತರರಿದ್ದರು.

ಎಚ್.ಡಿ.ಕೋಟೆ: ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇರುವ ಎಚ್.ಡಿ.ಕೋಟೆ ತಾಲೂಕಿನಲ್ಲಿ ಮೂರು ಜಲಾಶಯಗಳಿವೆ. ಅದ್ಭುತವಾದ ಅರಣ್ಯ ಸಂಪತ್ತು ಇದೆ ಎಂದು ಎಸ್‌ವಿಜಿ ಸೆಂಟರ್ ಆಫ್ ಎಕ್ಸ್‌ಲೆನ್ಸ ಮೈಸೂರು ಹಾಗೂ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಶೇಷಾಚಲ ತಿಳಿಸಿದರು.


ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.


ಎಚ್.ಡಿ.ಕೋಟೆ ಅಭಿವೃದ್ಧಿ ಹೊಂದುತ್ತಿರುವ ತಾಲೂಕು ಪಟ್ಟಿಗೆ ಸೇರಬೇಕಾದರೆ ಯುಜನತೆ ಪಾತ್ರ ಅತಿ ಮುಖ್ಯ. ವಿದ್ಯಾರ್ಥಿಗಳು ಪಾಠ ಮತ್ತು ಪ್ರವಚನಕ್ಕೆ ಆದ್ಯತೆ ಕೊಡುವಂತೆ, ಕ್ರೀಡೆಗೂ ಆದ್ಯತೆ ಕೊಡಬೇಕು. ಜಿಲ್ಲಾ, ರಾಜ್ಯ, ಅಂತಾರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲೂ ಸ್ವರ್ಧೆ ಮಾಡಬೇಕು. ಸ್ವರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು, ಗೆಲುವು ಮತ್ತು ಸೋಲು ಮುಖ್ಯ ಅಲ್ಲ. ಸೋಲೇ ಗೆಲುವಿಗೆ ಸೋಪಾನ ಎನ್ನುವುದನ್ನು ವಿದ್ಯಾರ್ಥಿಗಳು ಮರೆಯಬಾರದು. ವಿದ್ಯಾರ್ಥಿಗಳು ಉತ್ತಮ ನಡೆ, ನುಡಿ ಮತ್ತು ಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.


ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ ಡಾ. ರಮಾನಂದ ಮಾತನಾಡಿ, ಕ್ರೀಡೆ ಬದುಕಿಗೆ ಅತಿ ಅವಶ್ಯ. ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಮನುಷ್ಯ ಏನಾನ್ನಾದರೂ ಸಾಧಿಸಬಹುದು. ಕ್ರೀಡೆಗಳಲ್ಲಿ ಕಾಣುವ ಸೋಲು-ಗೆಲುವು, ಮನುಷ್ಯನಿಗೆ ಬದುಕಿನ ಪಾಠ ಕಲಿಸಿಕೊಡುತ್ತದೆ. ಗೆದ್ದರೆ ಖುಷಿ ಪಡಬೇಕು. ಸೋತರೆ ಮುಂದಿನ ಬಾರಿ ಗೆಲ್ಲಬೇಕು ಎಂದು ಕಿವಿಮಾತು ಹೇಳಿದರು.


ಶ್ರೀ ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಾಂಶುಪಾಲ ಭರತ್‌ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 2023- 24 ನೇ ಸಾಲಿನಲ್ಲಿ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗ ಪ್ರಾರಂಭ ಮಾಡಿದ್ದು, ಮೊದಲ ವರ್ಷದಲ್ಲೇ 81 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹಾಗೆಯೇ ಇದೇ ಮೊದಲ ಬಾರಿಗೆ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆ, ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ. ಕ್ರೀಡೆಯು ವಿಧ್ಯಾರ್ಥಿಗಳ ಆರೋಗ್ಯವನ್ನು ಉತ್ತಮವಾಗಿ ಇಡುತ್ತದೆ ಮತ್ತು ಉತ್ತಮ ಬದುಕನ್ನು ಕಟ್ಟಿಕೊಡುವ ಶಕ್ತಿ ಅದಕ್ಕಿದೆ ಎಂದರು.

ಪುರಸಭೆ ಸದಸ್ಯೆ ಸುಹಾಸಿನಿ ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತ ಬಸವರಾಜಪ್ಪ, ಮನುಗನಹಳ್ಳಿ ಮಾದಪ್ಪ, ಗಣೇಶ್ಚಾರ್, ಸಂಸ್ಥೆಯ ಕಾರ್ಯದರ್ಶಿ ಶ್ರುತಿ ವಿಶ್ವನಾಥ್, ಆಡಳಿತಾಧಿಕಾರಿ ಜಯದೇವರಾಜೇ ಅರಸ್, ಸಂಯೋಜನಾಧಿಕಾರಿ ಶಿವರಾಜು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಡಿ.ಕುಮಾರಸ್ವಾಮಿ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪಿ.ಕಂದಸ್ವಾಮಿ, ಉಪ ಪ್ರಾಂಶುಪಾಲ ಎಸ್.ಡಿ.ವಾಸು, ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸನಾಯಕ, ಕ್ರೀಡಾ ಸಂಚಾಲಕ ಕಾಳರಾಜು, ಅಂತಾರಾಜ್ಯ ಕ್ರೀಡಾಪಟುಗಳಾದ ನಾಗೇಶ್(ಕುಸ್ತಿಪಟು), ಎಸ್.ವಿ.ಶ್ರೀಧರ್ (ಹ್ಯಾಂಡ್ಬಾಲ್), ಸಮರ್ಥ ಫೌಂಡೇಷನ್ ಸಂಸ್ಥಾಪಕ ಪ್ರಕಾಶ್, ವಿವಿಧ ಕಾಲೇಜಿನಿಂದ ಬಂದಿದ್ದ ಪ್ರಾಂಶುಪಾಲರಾದ ಸಂತೋಷ್ ಕುಮಾರ್, ಬೈರೇಗೌಡ, ಸುದೀಪ್, ಗುರುಸಿದ್ದ, ಜೋಸೆಫ್, ಚಂದ್ರಶೇಖರ್, ಹನುಮಂತರಾಜ್, ಸಂತೋಷ್ ಮತ್ತಿತರರು ಹಾಜರಿದ್ದರು.