ಎಚ್.ಡಿ.ಕೋಟೆ: ತಾಲೂಕಿನ ತಾರಕ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದರೆ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ವರ್ಷದಲ್ಲಿ ಎರಡು ಬೆಳೆ ಬೆಳೆಯಬಹುದು. ಹೀಗಾಗಿ ಜಲಾಶಯದಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವಂತೆ ರೈತರು ಒತ್ತಾಯಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ತಹಸೀಲ್ದಾರ್ ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ರೈತ ಸಂಪರ್ಕ ಸಭೆಯಲ್ಲಿ ರೈತರು ನೀರಿನ ಅಗತ್ಯತೆ ಕುರಿತು ಅಧಿಕಾರಿಗಳ ಗಮನಸೆಳೆದರು.
ತಾರಕ ಜಲಾಶಯ ಮತ್ತು ಕಬಿನಿ ಜಲಾಶಯದ ಅಚ್ಚುಕಟ್ಟಿನ ಬಹುತೇಕ ಕೆರೆಗಳಲ್ಲಿ ತುಂಬಿರುವ ಹೂಳನ್ನು ತೆಗೆದು ನೀರು ತುಂಬಿಸಿದರೆ ರೈತರು ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಬೇಸಿಗೆಕಾಲ ಸಮೀಪಿಸುತ್ತಿರುವುದರಿಂದ ದನಕರುಗಳಿಗೆ ಕುಡಿವ ನೀರಿಗೆ ಸಮಸ್ಯೆಯಾಗದಂತೆ ಕೆರೆ-ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ಸರ್ಕಾರ ಜಲಮೂಲ ಯೋಜನೆ ಜಾರಿ ಮಾಡಿದ್ದು, ಅದರ ಮೂಲಕ 9 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಿಕೊಡಲಾಗುವುದು. ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲಾಗುವುದು. ಕೆರೆ ಕಾಮಗಾರಿಯನ್ನು ಗುತ್ತಿಗೆ ನೀಡುವ ಬದಲು ಗ್ರಾಮದ ಸ್ವಸಹಾಯ ಸಂಘಗಳಿಗೆ ಅಥವಾ ಗ್ರಾಮ ಸಮಿತಿ ಮಾಡಿ ಆ ಮೂಲಕ ಕಾಮಗಾರಿ ನೀಡಿ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ಶೀಘ್ರವೇ ನೀರು ಬಿಡಿ: ರೈತ ಕ್ಷೀರಸಾಗರ್ ಮಾತನಾಡಿ, ಕಬಿನಿ ಜಲಾಶಯದಲ್ಲಿ ನೀರು ತುಂಬಿದ್ದರೂ ಅಧಿಕಾರಿಗಳು ಬೆಳೆ ಬೆಳೆಯಲು ನೀರು ಬಿಡದೆ ಸಲಹಾ ಸಮಿತಿ ಸಭೆಯ ನಂತರ ನೀರು ಬಿಡುವುದಾಗಿ ಹೇಳುತ್ತಿದ್ದಾರೆ. ಆದರೆ ಸಭೆ ನಡೆದು ಮಾರ್ಚ್ ತಿಂಗಳಲ್ಲಿ ನೀರು ಬಿಟ್ಟರೆ ಮಳೆಗಾಲ ಪ್ರಾರಂಭವಾಗಿ ರೈತರಿಗೆ ಬೆಳೆ ಬರುವ ಬದಲು ನಷ್ಟ ಉಂಟಾಗುತ್ತದೆ. ಹೀಗಾಗಿ ಶೀಘ್ರದಲ್ಲೇ ನೀರು ಬಿಡುವಂತೆ ಮನವಿ ಮಾಡಿದರು.
ತಾರಕ ಜಲಾಶಯದ 149 ತೂಬುಗಳು ಮತ್ತು ಅದರ ಕೆಳಹಂತದ ತೂಬುಗಳು ಹಾಳಾಗಿದ್ದು, ಅದನ್ನು ದುರಸ್ತಿ ಮಾಡಿಸಿ, ಜಮೀನುಗಳಿಗೆ ನೀರು ಬಿಡುವಂತೆ ಒತ್ತಾಯಿಸಿದರು. ರೈತ ಕುಮಾರಸ್ವಾಮಿ ಮಾತನಾಡಿ, ಕೃಷಿ ಇಲಾಖೆಯ ಬೆಳೆವಿಮೆ ಯೋಜನೆಯು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಅರ್ಹ ರೈತರಿಗೆ ವಿಮೆ ಸೌಲಭ್ಯ ಸಿಗುವಂತೆ ಕ್ರಮ ವಹಿಸಬೇಕು. ತಾಲೂಕಿನಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಬೇಕು. ಎಸ್ಸಿ-ಎಸ್ಟಿ ಜನಾಂಗಗಳಿಗೆ ಕೃಷಿ ಇಲಾಖೆಯಿಂದ ನೀಡುತ್ತಿರುವ ಸೌಲಭ್ಯಗಳು ಸಾಕಾಗುತ್ತಿಲ್ಲ. ಹೀಗಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ರೈತ ಮಾದೇವ ಮಾತನಾಡಿ, ರೈತರು ಭೂಮಿ ಖರೀದಿ ಮಾಡಲು ಹಲವಾರು ದಾಖಲೆಗಳನ್ನು ಕೇಳುವ ಅಧಿಕಾರಿಗಳು ಬೇರೆ ರಾಜ್ಯದಿಂದ ಬರುವ ಭೂಮಾಫಿಯಾದವರಿಗೆ ಯಾವುದೇ ದಾಖಲೆಗಳನ್ನು ಕೇಳದೆ ಅವರಿಂದ ಹಣ ಪಡೆದು ದಾಖಲೆಗಳನ್ನು ನೀಡಿ ಜಮೀನು ಖರೀದಿ ಮಾಡಲು ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಒತ್ತಾಯಿಸಿದರು.
ಬೀರಂಬಳ್ಳಿ ರೈತ ಪ್ರಭಾಕರ್ ಮಾತನಾಡಿ, ಯಾವ ಕಾಲದಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದರ ಕುರಿತು ಕೃಷಿ ಇಲಾಖೆ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ. ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಹಾಕುವಂತೆ ಹಲವಾರು ಸಭೆಗಳಲ್ಲಿ ಪ್ರಸ್ತಾಪ ಮಾಡಿದರೂ ಇದುವರೆಗೂ ಒಂದು ಅಂಗಡಿಯಲ್ಲೂ ದರಪಟ್ಟಿ ಹಾಕಿರುವುದಿಲ್ಲ. ಅಂಗಡಿಯವರು ಹೇಳಿದ ದರವನ್ನು ನೀಡಿ ರಸಗೊಬ್ಬರ ಖರೀದಿ ಮಾಡಬೇಕಾಗಿದೆ. ಅಧಿಕಾರಿಗಳು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಕೆಇಬಿ ಹಾಗೂ ಮುಂತಾದ ಇಲಾಖೆಯ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದರು. ಸಿಪಿಐ ಪುಟ್ಟಸ್ವಾಮಿ, ಪಿಎಸ್‌ಐ ಪುಟ್ಟರಾಜು, ಪುರಸಭಾ ಮುಖ್ಯಾಧಿಕಾರಿ ವಿಜಯ್ ಕುಮಾರ್, ಸಿದ್ದರಾಜು, ಪಳನಿಸ್ವಾಮಿ, ಮಹದೇವನಾಯಕ, ಮಟಕೆರೆ ಕೃಷ್ಣ, ಬೆಟ್ಟನಾಯಕ ಇದ್ದರು.