ನ್ಯೂಸ್

ತಾಯಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗುತ್ತದೆಯೆ?

ಪ್ರಶ್ನೆ:  ನಮ್ಮ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳು. ಒಂದು ಹುಡುಗ ಒಂದು ಹುಡುಗಿ. ನಮ್ಮ ತಂದೆ ತಾಯಿ ಇಬ್ಬರ ಹೆಸರಿನಲ್ಲಿ ಜಾಯಿಂಟ್ ಆಗಿ ಸ್ವತ್ತು ಇದೆ. ನಮ್ಮ ತಾಯಿ ತೀರಿಕೊಂಡಿದ್ದಾರೆ. ನಮ್ಮ ತಂದೆ ಈಗ ಆಸ್ತಿಯನ್ನು ನನ್ನ ಸೋದರನ ಹೆಸರಿಗೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇಲ್ಲ ಎನ್ನುತ್ತಿದ್ದಾರೆ .ನಮಗೆ ಇಬ್ಬರಿಗೂ ಇನ್ನೂ ಮದುವೆ ಆಗಿಲ್ಲ. ಈಗಲೇ ಹೀಗೆ ಮಾಡಿದರೆ ನನಗೆ ಮುಂದೆ ಏನೂ ಸಿಗದೇ ಹೋಗಬಹುದು ಎನ್ನಿಸುತ್ತದೆ . ನಾನು ಏನು ಮಾಡಬೇಕು ತಿಳಿಸಿ.

ಉತ್ತರ: ನಿಮ್ಮ ತಂದೆ ಮತ್ತು ತಾಯಿಯ ಜಂಟಿ ಹೆಸರಿನಲ್ಲಿ ಆಸ್ತಿ ಇರುವುದರಿಂದ ಅವರಿಬ್ಬರಿಗೂ ಆಸ್ತಿಯಲ್ಲಿ ಅರ್ಧ ಪಾಲುಸಮವಾಗಿ ಹಕ್ಕು ಇರುತ್ತದೆ. ನಿಮ್ಮ ತಂದೆಯ ಅರ್ಧ ಪಾಲನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ನಿಮ್ಮ ಸೋದರನಿಗೆ ಅವರು ಕೊಡುವುದನ್ನು ನೀವು ತಪ್ಪಿಸಲು ಆಗುವುದಿಲ್ಲ. ಆದರೆ ನಿಮ್ಮ ಮೃತ ತಾಯಿಯ ಆಸ್ತಿಯಲ್ಲಿ ನಿಮಗೆ, ನಿಮ್ಮ ಸೋದರನಿಗೆ ಮತ್ತು ನಿಮ್ಮ ತಂದೆಗೆ ಸಮವಾಗಿ ಮೂರನೇ ಒಂದು ಭಾಗ ಇರುತ್ತದೆ. ಅಂದರೆ ನಿಮ್ಮ ತಾಯಿಯ ಅರ್ಧ ಬಾಗದಲ್ಲಿ ನಿಮ್ಮ ಮೂವರಿಗೂ ತಲಾ ಮೂರನೇ ಒಂದು ಭಾಗ ಇರುತ್ತದೆ. ಹೀಗಾಗಿ ನಿಮ್ಮ ತಂದೆ ತನ್ನ ಅರ್ಧ ಭಾಗವನ್ನು ಮತ್ತು ನಿಮ್ಮ ತಾಯಿಯ ಅರ್ಧಭಾಗದಲ್ಲಿ ಮೂರನೇ ಒಂದು ಭಾಗವನ್ನು ನಿಮ್ಮ ಸೋದರನಿಗೆ ಕೊಡಬಹುದು.

ನಿಮ್ಮ ತಾಯಿಯ ಅರ್ಧ ಭಾಗದಲ್ಲಿ ನಿಮಗೆ ಇರುವ ಮೂರನೇ ಒಂದು ಭಾಗವನ್ನು ಅವರು (ಅಂದರೆ ಒಟ್ಟು ಆಸ್ತಿಯಲ್ಲಿ ನಿಮ್ಮ ಆರನೇ ಒಂದು ಭಾಗವನ್ನು) ನಿಮ್ಮ ಸೋದರನಿಗೆ ಬರೆದುಕೊಡುವಂತಿಲ್ಲ.

ಆದರೆ, ಇಂತಹ ವಿಷಯಗಳಲ್ಲಿ ಕೂತು ಮಾತಾಡಿ ಒಮ್ಮತದ ನಿರ್ಧಾರಕ್ಕೆ ಬಂದು ಒಂದು ಸೆಟಲ್ಮೆಂಟ್ ಡೀಡ್ ಮಾಡಿಸಿ ನೋಂದಾಯಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಹಿರಿಯರ ಮೂಲಕ ಹೇಳಿಸಿ ನೋಡಿ. ಇಲ್ಲದಿದ್ದರೆ ನಿಮ್ಮ ತಾಯಿಯ ಅರ್ಧ ಭಾಗದಲ್ಲಿ ಮೂರನೇ ಒಂದು ಭಾಗಕ್ಕೆ ( ಒಟ್ಟು ಆಸ್ತಿಯಲ್ಲಿ ಆರನೇ ಒಂದು ಭಾಗಕ್ಕೆ) ನೀವು ವಿಭಾಗದ ಕೇಸು ಹಾಕಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.