ನ್ಯೂಸ್

ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕನಸು ನನಸು

ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಬಳಿ ನಿರ್ಮಿಸಲಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ನೂತನ ಕಟ್ಟಡವನ್ನು ಸಚಿವ ಎಸ್.ಟಿ. ಉದ್ಘಾಟಿಸಿದರು. ಶಾಸಕ ಕೆ.ಮಹದೇವ್, ಕೆ. ಮಹೇಶ್, ಪಿ.ಕೆ. ಆಶಾ, ಪಿ.ಸಿ.ಕೃಷ್ಣ , ಡಾ. ದೇವರಾಜ್ ಮತ್ತಿತರರು ಇದ್ದರು.

ಪಿರಿಯಾಪಟ್ಟಣ: ತಾಲೂಕಿನಲ್ಲಿ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸುವ ಮೂಲಕ ಉಪ ವಿಭಾಗದ ತಾಲೂಕುಗಳಲ್ಲಿನ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣ ಪಡೆಯುವ ಕನಸು ನನಸಾಗುತ್ತಿದೆ ಎಂದು ಶಾಸಕ ಕೆ. ಮಹದೇವ್ ಅಭಿಪ್ರಾಯಪಟ್ಟರು.


ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಬಳಿ ಇತ್ತೀಚೆಗೆ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಲು ಬೇಕಾದ ಎಲ್ಲ ಸುಸಜ್ಜಿತ ಸೌಲಭ್ಯಗಳನ್ನು ಈ ಕಟ್ಟಡದಲ್ಲಿ ಒದಗಿಸಲಾಗಿದೆ. ತಾಲೂಕಿನ ವಿದ್ಯಾರ್ಥಿಗಳ ಬಹುದಿನದ ಕನಸು ಇನ್ನು ಮುಂದೆ ಈಡೇರಲಿದೆ ಎಂದರು.


ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾದ ಕಾಮಗಾರಿಯು ನಿವೇಶನದ ಕುರಿತು ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ಸ್ಥಗಿತಗೊಂಡಿತ್ತು. ಬಳಿಕ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಸರ್ಕಾರದ ಮಟ್ಟದಲ್ಲಿ ಅನುಮತಿಯನ್ನು ಪಡೆದು ಕಾಮಗಾರಿ ಪೂರ್ಣಗೊಳಿಸಲು ಇಷ್ಟು ದಿನ ಬೇಕಾಯಿತು ಎಂದು ವಿವರ ನೀಡಿದರು.


ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಪುರಸಭೆ ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೆ ಪಿ.ಕೆ. ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ. ಕೃಷ್ಣ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಂ. ರಾಜೇಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಆರ್.ಟಿ. ಸತೀಶ್, ಎಸ್.ರಾಮು, ವಿದ್ಯಾಶಂಕರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದೇವರಾಜು, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ರಾಜಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.