ನ್ಯೂಸ್

ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯ

ಬೇಲೂರು: ತಾಲೂಕಿನ ಕಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಸಂದರ್ಭ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಎಂ.ಮಮತಾ, ಕಾನೂನು ಗಾಳಿಗೆ ತೂರಿ ತಮಗೆ ತೋಚಿದ ರೀತಿಯಲ್ಲಿ ಚುನಾವಣೆ ನಡೆಸಿ ನಮ್ಮ ಮೇಲೆ ದರ್ಪ ತೋರಿದ್ದಾರೆ ಎಂದು ಕಳ್ಳೇರಿ ಗ್ರಾಮ ಪಂಚಾಯಿತಿ ಸದಸ್ಯ ಗೆಂಡೇಹಳ್ಳಿ ಶ್ರೀನಿವಾಸ್ ಆರೋಪಿಸಿದರು.

ಮಂಗಳವಾರ ಕಳ್ಳೇರಿ ಗ್ರಾಪಂ ಅಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಕಳ್ಳೇರಿ ಕ್ಷೇತ್ರದ ಸದಸ್ಯನಾದ ನಾನು ಹಾಗೂ ಪರಿಶಿಷ್ಟ ಮಹಿಳಾ ಕ್ಷೇತ್ರದ ಮೀನಾಕ್ಷಿ ಅವರಿಗೆ ನೀಡಿದ ಜ್ಞಾಪನ ಪತ್ರದಂತೆ ಸರಿಯಾದ ಸಮಯಕ್ಕೆ ಹಾಜರಿದ್ದೆವು. ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಎಂ.ಮಮತಾ ಅವರಿಗೆ ಒಂದು ಗಂಟೆಗೆ ಸಮಯ ನಿಗದಿಯಾಗಿತ್ತು. ಆದರೆ, ಅವರೇ ತಡವಾಗಿ ಬಂದರು. ನಾವು ಒಳಗೆ ಹೋದಾಗ ತಹಸೀಲ್ದಾರರು ನೀವಿಬ್ಬರು ಸಭೆಗೆ ಬರುವಂತಿಲ್ಲ. ಸಮಯ ಮೀರಿದೆ ಎಂದು ಏರುಧ್ವನಿಯಲ್ಲಿ ಹೇಳಿದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ವೇಳೆ ನಾನು ಪಂಚಾಯತ್ ರಾಜ್ ನಿಯಮಾವಳಿ ಪ್ರತಿ ತೋರಿಸಿ ಎಂದು ಕೇಳಿದೆ. ಆದಕ್ಕೆ ಅವರು ಅದನ್ನು ನಿಮಗೇಕೆ ತೋರಿಸಬೇಕು, ನೀವು ಸಭೆಗೆ ಬರಬಾರದು. ನಡಾವಳಿಗೆ ಸಹಿ ಹಾಕುವಂತಿಲ್ಲ ಎಂದು ಹೆದರಿಸಿದರು. ಅಲ್ಲದೆ ನಾಮಪತ್ರ ಹಿಂಪಡೆಯುವ ಸಮಯ ಮೀರಿದ್ದಲ್ಲದೆ, ಚುನಾವಣೆ ಸಮಯವೂ ಮೀರಿತ್ತು. ಎಲ್ಲವನ್ನೂ ಗಾಳಿಗೆ ತೂರಿ ಚುನಾವಣೆ ಮುಗಿಸಿದರು. ಈ ಸಂದರ್ಭ ತಹಸೀಲ್ದಾರರು ಗ್ರಾಪಂ ಸದಸ್ಯರಾದ ನಮ್ಮ ಹಕ್ಕಿಗೆ ಚ್ಯುತಿ ಮಾಡಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ನಾನು ತಾಲೂಕು ಕಚೇರಿಯಲ್ಲಿ ನಡೆಯುತಿದ್ದ ಭ್ರಷ್ಟಾಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು. ನಮ್ಮ ಮೇಲೆ ಹಗೆ ಸಾಧಿಸಿ ನಮ್ಮ ಹಕ್ಕಿಗೆ ಚ್ಯುತಿ ಮಾಡಿದ್ದಾರೆ. ಇವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ನೀಡಿ, ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಕೆಡಿಪಿ ಸದಸ್ಯ ನಂದೀಶ್, ಕಳ್ಳೆರಿ ಗ್ರಾಪಂ ಸದಸ್ಯೆ ಮೀನಾಕ್ಷಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಸಚಿನ್ ಇದ್ದರು.