ನ್ಯೂಸ್

ತಹಸೀಲ್ದಾರ್ ಆಗಿ ಶಂಶಾಲಂ ಅಧಿಕಾರ ಸ್ವೀಕಾರ

ನೂತನ ತಹಸೀಲ್ದಾರ್ ನಾಗಡ ದನ್ನಿ ಶಂಶಾಲಂ

ಸರಗೂರು: ತಾಲೂಕಿನ ನೂತನ ತಹಸೀಲ್ದಾರ್ ಆಗಿ ನಾಗಡ ದನ್ನಿ ಶಂಶಾಲಂ ಗುರುವಾರ ಅಧಿಕಾರ ಸ್ವೀಕರಿಸಿದರು.


ರಾಯಚೂರು ಜಿಲ್ಲೆಯ ಲಿಂಗಸೂರಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರಗೂರು ತಹಸೀಲ್ದಾರ್ ಚೆಲುವರಾಜು ವರ್ಗಾವಣೆಗೊಂಡ ಬಳಿಕ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ ಅವರು ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಾಗಡ ದನ್ನಿ ಶಂಶಾಲಂ ಅವರು ನೇಮಕಗೊಂಡಿದ್ದಾರೆ.


ಅಧಿಕಾರ ಸ್ವೀಕರಿಸಿ ಮಾತನಾಡಿದ ನಾಗಡ ದನ್ನಿ ಶಂಶಾಲಂ, ತಾಲೂಕಿನ ಸರ್ಕಾರಿ ಜಮೀನುಗಳನ್ನು ಉಳಿಸುವುದು ಹಾಗೂ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವುದು ನನ್ನ ಆದ್ಯತೆಯಾಗಿದ್ದು, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.