ನ್ಯೂಸ್

ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಅಂತರ್‌ಇಲಾಖಾ ಸಮನ್ವಯ ಸಮಿತಿ ಸಭೆ/ಇಲಾಖೆಗಳ ಸಮನ್ವಯತೆ ಸಾಧಿಸಿ ಡೆಂಗ್ಯು ನಿಯಂತ್ರಿಸೋಣ/ಹರ್ಷವರ್ಧನ್

ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲ್ಲೂಕಿನಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಸರ್ಕಾರದ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು, ಆರೋಗ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ರೋಗ ತಡೆಗೆ ಶ್ರಮಿಸಬೇಕು ಎಂದು ತಹಸೀಲ್ದಾರ್ ಹರ್ಷವರ್ಧನ್ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಡೆಂಗ್ಯು ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ತಾಲ್ಲೂಕು ಮಟ್ಟದ ಎಲ್ಲಾ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡೆಂಗ್ಯು ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ, ಆಯಾ ಇಲಾಖೆಗೆ ವಹಿಸಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಸರ್ಕಾರವೂ ಸಹಾ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.

ಶಿಕ್ಷಣ ಇಲಾಖೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಮಕ್ಕಳಿಂದ ಜಾಗೃತಿ ಜಾಥಾ ನಡೆಸಿ ಸಮುದಾಯಕ್ಕೂ ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಡೆಂಗ್ಯು ಜಾಗೃತಿ ಜಾಥಾ ನಡೆಸುವಾಗ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ನೀಡಬೇಕು ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಸ್ವಚ್ಚತೆಗೆ ಒತ್ತು ನೀಡಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಕೃಷಿ ಹಾಗೂ ತೋಟಗಾರಿಕಾ, ಅರಣ್ಯ ಇಲಾಖೆಗಳು ಕೃಷಿಹೊಂಡ, ನೀರಿನ ತಾಣಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಕ್ರಮವಹಿಸಲು ರೈತರಿಗೆ ಸೂಚಿಸಬೇಕು, ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಮೀನುಗಾರಿಕೆ ಇಲಾಖೆ ಸೊಳ್ಳೆಗಳ ಲಾರ್ವ ನಾಶಕ್ಕೆ ಕಾರಣವಾದ ಗಪ್ಪಿ ಮತ್ತು ಗಾಂಬೋಸಿಯಾ ಮೀನುಗಳನ್ನು ಬೆಳೆಸಿ ಆರೋಗ್ಯ ಇಲಾಖೆ ಕೇಳಿದಾಗ ಒದಗಿಸಬೇಕು, ಸೊಳ್ಳೆಗಳ ಉತ್ಪತ್ತಿ ತಡೆಯುವುದರಿಂದ ಮಾತ್ರವೇ ಡೆಂಗ್ಯು ನಿಯಂತ್ರಣ ಸಾಧ್ಯವೆಂದು ಅರಿಯಬೇಕು ಎಂದರು.

ನಗರಸಭೆ, ಪುರಸಭೆಗಳು ತಮ್ಮ ಸ್ವಚ್ಚತಾ ವಾಹಿಯ ಮೂಲಕ ಆರೋಗ್ಯ ಇಲಾಖೆ ಒದಗಿಸಿರುವ ಡೆಂಗ್ಯು ಜಾಗೃತಿ ಮಾಹಿತಿಯನ್ನು ಸದಾ ಪ್ರಸಾರ ಮಾಡಲು ಸೂಚಿಸಿದರು.

ವಾರಕ್ಕೊಮ್ಮೆಲಾರ್ವ ನಿರ್ಮೂಲನಾ ದಿನ
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಡೆಂಗ್ಯುಗೆ ಕಾರಣವಾದ ಈಡೀ ಸೊಳ್ಳೆ ತನ್ನ ಸಂತತಿ ಬೆಳೆಸಲು ಅವಕಾಶ ನೀಡಬಾರದು, ವಾರಕ್ಕೊಮ್ಮೆ ಒಣದಿನ ಅಥವಾ ಸೊಳ್ಳೆಗಳ ಲಾರ್ವ ನಿರ್ಮೂಲನಾ ದಿನವನ್ನಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜನತೆಯಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಕೋರಿದರು.

ತಾಪಂ ಇಒ ಮುನಿಯಪ್ಪ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಮಾರ್ಗದರ್ಶನ ನೀಡಿದ್ದು, ಪ್ರತಿ ಶುಕ್ರವಾರ ಒಣದಿನ ಆಚರಿಸಲು ಸೂಚಿಸಲಾಗಿದೆ, ಗ್ರಾಮ ಪಂಚಾಯಿತಿಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಶಿಕ್ಷಣ ಇಲಾಖೆಯ ಬಿಇಒ ಕನ್ನಯ್ಯ, ಪಶುಪಾಲನಾ ಇಲಾಖೆಯ ಡಾ.ವಿಜಯ್, ಅರಣ್ಯ ಇಲಾಖೆಯ ಶಶಿಕುಮಾರ್, ತೋಟಗಾರಿಕಾ ಇಲಾಖೆಯ ರವಿಕುಮಾರ್, ಕೃಷಿ ಇಲಾಖೆಯ ಮಹೇಶ್‌ಬಾಬು, ಮೀನುಗಾರಿಕಾ ಇಲಾಖೆಯ ಸುಬ್ರಹ್ಮಣ್ಯಂ, ಗ್ರಾಮಾಂತರ ಠಾಣೆ ಪಿಎಸ್‌ಐ ಭಾರತಿ, ರೇಷ್ಮೆ ಇಲಾಖೆಯ ಬೈರೇಗೌಡ, ವೇಮಗಲ್ ಪುರಸಭೆ ಮುಖ್ಯಾಧಿಕಾರಿ ಎಸ್.ಎಂ.ವೆAಕಟೇಶ್, ಸಾರಿಗೆ ಸಂಸ್ಥೆಯ ಸವಿತಾ ಮತ್ತಿತರರು ಹಾಜರಿದ್ದರು.

ಚಿತ್ರ ೦೯ ಕೆ.ಎಲ್.ಆರ್. ೦೪ : ಕೋಲಾರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಡೆಂಗ್ಯು ನಿಯಂತ್ರಣಕ್ಕಾಗಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಯಿತು.