ಪಿರಿಯಾಪಟ್ಟಣ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವುದನ್ನು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಪದಾಧಿಕಾರಿಗಳು ಖಂಡಿಸಿದ್ದಾರೆ.
ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ತೋಟಗಾರಿಕಾ ಇಲಾಖೆ ಕಚೇರಿ ಪಕ್ಕದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ ಅರ್ಧಂಬರ್ಧ ಕಾಮಗಾರಿ ನಡುವೆಯೇ ಉದ್ಘಾಟನೆ ಮಾಡಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮುಂದಾಗಿದ್ದಾರೆ ಎಂದು ವೇದಿಕೆ ಮುಖಂಡ ಟಿ.ಈರಯ್ಯ ದೂರಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ಶಾಸಕ ಕೆ.ವೆಂಕಟೇಶ್ ಹಣ ಬಿಡುಗಡೆ ಮಾಡಿಸಿ ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ಕಾಮಗಾರಿ ಆರಂಭಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಣದ ಕೊರತೆಯಿಂದ ನಿಂತುಹೋಗಿದ್ದ ಕಾಮಗಾರಿಗೆ ಶಾಸಕ ಕೆ.ಮಹದೇವ್ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಮುಂದುವರಿಸಲಾಯಿತು. ಭವನದಲ್ಲಿ ಶೌಚಗೃಹ ಹಾಗೂ ಕಟ್ಟಡದ ಮುಂಭಾಗ ಮತ್ತು ಒಳಭಾಗದ ವಾಸ್ತುವಿನ್ಯಾಸ ಸರಿಯಿಲ್ಲ, ಅಡುಗೆ ಮನೆಗೆ ಅಗತ್ಯ ಸಾಮಗ್ರಿ ಮತ್ತು ಪೀಠೋಪಕರಣ ಒದಗಿಸಿಲ್ಲ, ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು ಈ ಕಟ್ಟಡ ಯಾವುದೇ ಬಳಕೆಗೆ ಯೋಗ್ಯವಾಗಿಲ್ಲದಿದ್ದರೂ ಇಲಾಖೆ ಅಧಿಕಾರಿಗಳು ಕಟ್ಟಡ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂಲ ನಕಾಶೆಯಂತೆ ಗುಣಮಟ್ಟದ ಕಾಮಗಾರಿ ಮಾಡಿ ಉದ್ಘಾಟನೆಗೆ ಮುಂದಾಗಬೇಕೆಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಮುಖಂಡರಾದ ಸೀಗೂರು ವಿಜಯ್‌ಕುಮಾರ್, ಎಚ್.ಡಿ.ರಮೇಶ್, ಪಿ.ಪಿ.ಮಹದೇವ್ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮತ್ತು ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.