ನ್ಯೂಸ್

ತರಗತಿ ಕಲಿಕೆ ಜತೆಗೆ ನಾವೀನ್ಯತೆ ಅಳವಡಿಸಿಕೊಳ್ಳಿ

ತರಗತಿಯ ಕಲಿಕೆಯೊಂದಿಗೆ ಆಧುನಿಕ ನಾವೀನ್ಯತೆಗಳನ್ನು ತಿಳಿದಾಗ ಮಾತ್ರ ಭವಿಷ್ಯದಲ್ಲಿ ಹೊಸತನವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್.ದೇಸಾಯಿ ಹೇಳಿದರು.

ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚೆನ್ನಯ್ಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ದಿನಾಚರಣೆಯಲ್ಲಿ ಮಾತನಾಡಿದರು.

ಪದವಿ ಶಿಕ್ಷಣವೂ ಒಂದು ಚೌಕಟ್ಟಿನೊಳಗೆ ಇರುತ್ತದೆ. ಆದರೆ ನಾವು ಒಂದು ಸಮಸ್ಯೆಯನ್ನು ಪರಿಹರಿಸಲು ಬಯಸಿದಾಗ ಆ ಚೌಕಟ್ಟನ್ನು ದಾಟಿ ಹೋಗಬೇಕಾಗುತ್ತದೆ. ಇದಕ್ಕ್ಕಾಗಿ ತರಗತಿಯ ಆಚೆಗೂ ಯೋಚನೆ ಮಾಡುವ ಅವಶ್ಯಕತೆ ಇರುತ್ತದೆ. ಇಂತಹ ಆಲೋಚನೆಗಳು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುವುದಲ್ಲದೇ ಅವರ ಭವಿಷ್ಯಕ್ಕೆ ಏಣಿಯಾಗುತ್ತದೆ ಎಂದರು.

ಪ್ರಸ್ತುತ ಜಾಗತಿಕ ವಲಯದಲ್ಲಿ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರತೆಯ ಸವಾಲುಗಳು ಇವೆ. ಇಂತಹ ನೈಜ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದರೆ ಪದವಿ ಪಡೆದ ವಿದ್ಯಾರ್ಥಿಗಳು ತಾವು ಗಳಿಸಿಕೊಂಡಿರುವ ಶೈಕ್ಷಣಿಕ ಜ್ಞಾನವನ್ನು ಉಪಯೋಗಿಸಿಕೊಳ್ಳುವ ಅವಶ್ಯಕತೆ ಇದೆ. ಇದರಿಂದಾಗಿ ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಸಬಲೀಕರಣಗೊಳಿಸಬಹುದು ಎಂದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್ ಮಾತನಾಡಿ, ಭಾರತವು ನವೋದ್ಯಮ ರಾಷ್ಟ್ರವಾಗಿ ಬಹಳ ವೇಗವಾಗಿ ಬೆಳವಣಿಗೆಯಾಗುತ್ತಿದೆ. ನಾವು ನಮ್ಮ ಸಂಸ್ಥೆಯಿಂದ ಪದವಿ ಪಡೆಯುವ ವಿದ್ಯಾರ್ಥಿಗಳನ್ನು ಉದ್ಯೋಗಾಕಾಂಕ್ಷಿಗಳಾಗಿ ಮಾತ್ರವಲ್ಲ. ಅವರೇ ಉದ್ದಿಮೆಗಳನ್ನು ಸ್ಥಾಪನೆ ಮಾಡಿ ಉದ್ಯೋಗ ನೀಡುವಂತವರಾಗುವಂತೆ ಪ್ರೋತ್ಸಾಹಿಸುತ್ತೇವೆ. ತನ್ಮೂಲಕ ನಮ್ಮ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಹೊಂದುವ ವಿಶ್ವವಿದ್ಯಾಲಯವಾಗುವ ದೃಷ್ಟಿಕೋನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದ ಅವರು, ವಿದ್ಯಾರ್ಥಿಗಳು ಸಾಧನೆಯ ಗುರಿಯನ್ನು ತಲುಪಲು ಅವರು ಹೊಂದಿರುವ ಮನೋಭಾವವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಎಲ್ಲರೂ ಸಾಧಿಸುವ ಛಲವನ್ನು ಹೊಂದಿರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದರು.

ಪ್ರಾಂಶುಪಾಲ ಬಿ.ಸದಾಶಿವೇಗೌಡ ಮಾತನಾಡಿ, ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳವಣಿಗೆಯು ವಿಕಸನಗೊಳ್ಳುತ್ತಿದೆ. ದೇಶವು 2030ರ ವೇಳೆಗೆ 10ಟ್ರಿಲಿಯನ್ ಆರ್ಥಿಕತೆ ಗುರಿಯನ್ನು ಹೊಂದಿದೆ. ಇದರಿಂದ ವಿದ್ಯಾಾರ್ಥಿಗಳು ನಿರಂತರ ಕಲಿಕೆಯ ಜತೆಗೆ ಹೊಸತನಕ್ಕೆ ಹೊಂದಿಕೊಳ್ಳುವಿಕೆಯ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ ಎಂದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಶಿವಲಿಂಗಪ್ಪ, ಉಪ ಪ್ರಾಂಶುಪಾಲ ಡಾ. ಶೋಭಾ ಶಂಕರ್, ಪರೀಕ್ಷಾ ನಿಯಂತ್ರಕ ಸುದೇವ್ ಇತರರಿದ್ದರು.

ಸಮಾರಂಭದಲ್ಲಿ 111ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ನೀಡಲಾಯಿತು. ಇಬ್ಬರು ಎಂ.ಟೆಕ್ ಪದವಿಯನ್ನು ಪಡೆದರು. 109 ಜನ ಎಂಬಿಎ ಪದವಿ ಪಡೆದರು. ರ‌್ಯಾಂಕ್ ಪಡೆದ ಹತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.