ವಿಜಯವಾಣಿ ಸುದ್ದಿಜಾಲ ಕೋಲಾರ
ತಬ್ಬಲಿ ಕಂದಮ್ಮಗಳಿಗೆ ಕಣ್ಣು ಕಾಣದ ವೃದ್ಧನೇ ಆಸರೆಯಾಗಿರುವ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಉನಿಕಿಲಿ ಬಡಾವಣೆಗೆ ಸೋಮವಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಭೇಟಿ ನೀಡಿ, ಮಕ್ಕಳ ಯೋಗಕ್ಷೇಮ ಹಾಗೂ ಪರಿಸ್ಥಿತಿಯನ್ನು ವೀಕ್ಷಿಸಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ವರದಿ ನೀಡಿದ್ದಾರೆ.
ವಿಜಯವಾಣಿ ಸೋಮವಾರದ ಸಂಚಿಕೆಯಲ್ಲಿ ಉನಿಕಿಲಿ ಗ್ರಾಮದ ೩ ಜನ ಕಂದಮ್ಮಗಳಿಗೆ ಕಣ್ಣುಕಾಣದ ವೃದ್ಧನೇ ಆಸರೆ ಎಂಬ ವರದಿ ಪ್ರಕಟವಾಗಿತ್ತು.
ತಂದೆ-ತಾಯಿ ಇಬ್ಬರು ೩ ಜನ ಮಕ್ಕಳನ್ನು ಬಿಟ್ಟು ೨ ವರ್ಷಗಳಿಂದ ಪರಾರಿಯಾಗಿದ್ದು, ೬೦ ವರ್ಷದ ಕಣ್ಣುಕಾಣದ ವಯೋವೃದ್ಧ ಮಕ್ಕಳನ್ನು ಅರಕಲು ಮನೆಯಲ್ಲಿ ಆರೈಕೆ ಮಾಡುತ್ತಿದ್ದ ಬಗ್ಗೆ ವಿಜಯವಾಣಿ ಬೆಳಕಿಗೆ ತರಲಾಗಿತ್ತು. ಜಿಲ್ಲಾಧಿಕಾರಿ ಅಕ್ರಂಪಾಷ ವರದಿಗೆ ಸ್ಪಂಧಿಸಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿಗೆ ಸೂಚನೆ ನೀಡಿ, ವರದಿ ನೀಡಲು ಸೂಚಿಸಿದರು.
ಉಪನಿರ್ದೇಶಕರ ಆದೇಶದ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಮತ್ತು ಜಿಲ್ಲಾ ನಿರೂಪಣಾಧಿಕಾರಿ ವಂಶೀಕೃಷ್ಣ ಸೋಮವಾರ ಉನಿಕಿಲಿ ಬಡಾವಣೆಗೆ ಭೇಟಿ ನೀಡಿ, ಮಕ್ಕಳನ್ನು ಕೆ.ಜಿ.ಎಫ್.ನಲ್ಲಿರುವ ಬಾಲಕ ಮತ್ತು ಬಾಲಕಿಯರ ಬಾಲ ಮಂದಿರಕ್ಕೆ ಒಪ್ಪಿಸುವಂತೆ ಕಣ್ಣುಕಾಣದ ತಾತ ಚಿನ್ನಪ್ಪ ನವರಿಗೆ ಮನವಿ ಮಾಡಿದ್ದಾರೆ.
ತಂದೆ-ತಾಯಿ ಇಲ್ಲದ ಮಕ್ಕಳನ್ನು ನನ್ನ ಪ್ರಾಣ ಇರುವ ತನಕ ಎಲ್ಲಿಯೂ ಕಳುಹಿಸುವುದಿಲ್ಲ. ಕಾಡಿ ಬೇಡಿಯಾದರೂ ಊಟ ತಂದು ಅವರನ್ನು ಸಾಕುತ್ತೇನೆ ಎಂದು ನಿರಾಕರಿಸಿದ್ದಾನೆ.
ಮಕ್ಕಳ ಆರೈಕೆಗಾಗಿ ಮಾಸಿಕ ೪೦೦೦ ರೂ.ಗಳನ್ನು ಮಂಜೂರು ಮಾಡಿಕೊಡುವುದಾಗಿ ದಾಖಲೆಗಳನ್ನು ನೀಡಲು ಒದಗಿಸಲು ತಿಳಿಸಿದ್ದು, ಅದರಂತೆ ಸ್ಥಳೀಯ ಸಿ.ಡಿ.ಪಿ.ಓ. ಅಧಿಕಾರಿಗಳು ಮಂಗಳವಾರ ಸ್ಥಳೀಯ ದಾಖಲೆಗಳನ್ನು ಕಣ್ಣು ಕಾಣದ ವಯೋ ವೃದ್ಧನಿಂದ ಪಡೆದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ರವಾನಿಸಿದ್ದಾರೆ.
ಕೋಟ್
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಜಿಲ್ಲಾ ನಿರೂಪಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳನ್ನು ಸರ್ಕಾರದ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ತಾತ ಅದಕ್ಕೆ ನಿರಾಕರಿಸಿದ್ದಾನೆ. ಮತ್ತೆ ಮನವೊಲಿಸುವ ಕೆಲಸ ಮಾಡಿ ಮಕ್ಕಳನ್ನು ಮೊರಾರ್ಜಿ ವಸತಿ ಶಾಲೆ ಅಥವಾ ಬಾಲ ಮಂದಿರದಲ್ಲಿ ಆರೈಕೆ ಮಾಡುವ ಕೆಲಸ ಮಾಡಲಾಗುವುದು. ಪ್ರತಿ ತಿಂಗಳ ೪೦೦೦ ಮಾಶಾಸನ ನೀಡಲು ದಾಖಲೆಗಳನ್ನು ಪಡೆದಿದ್ದಾರೆ. ಮೇಲಾಧಿಕಾರಿಗಳ ಅನುಮತಿ ಪಡೆದು ಪ್ರತಿ ತಿಂಗಳು ೪೦೦೦ ಮಾಶಾಸನ ಮಂಜೂರು ಮಾಡಿಸಿಕೊಡಲಾಗುವುದು. ಹಾಗೂ ಶನಿವಾರ ಶ್ರೀನಿವಾಸಪುರ ಸ್ಥಳೀಯ ಸಿ.ಡಿ.ಪಿ.ಓ. ಇಲಾಖೆಯಿಂದ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುವ ಕೆಲಸ ನಡೆದಿದೆ.
-ನಾರಾಯಣಸ್ವಾಮಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ.
ಬಾಕ್ಸ್
ತಬ್ಬಲಿ ಕಂದಮ್ಮಗಳಿಗೆ ಕಣ್ಣು ಕಾಣದ ವೃದ್ಧನ ಆಸರೆ ಎಂಬುವ ಬಗ್ಗೆ ರಾಜ್ಯಪುಟದಲ್ಲಿ ವರದಿಯನ್ನು ಗಮನಿಸಿರುವ ಎನ್.ಜಿ.ಓ.ದಿಂದ ನಡೆಯುತ್ತಿರುವ ಅನಾಥಾಶ್ರಮ ಮತ್ತು ವಸತಿ ಶಾಲೆಗಳವರಿಗೂ ದೂರವಾಣಿಯ ಮೂಲಕ ವಿಜಯವಾಣಿ ಸಂಪರ್ಕಿಸಿ ತಂದೆ-ತಾಯಿ ಇಲ್ಲದೆ ಅನಾಥರಾಗಿರುವ ಮೂರು ಜನ ಮಕ್ಕಳನ್ನು ನಮ್ಮ ವಸತಿ ಶಾಲೆಗಳಿಗೆ ನೀಡಿದರೆ ಅವರ ವಿದ್ಯಾಭ್ಯಾಸ ಮತ್ತು ಅವರ ಆರೈಕೆ ನಮ್ಮದಾಗಿದೆ. ಈ ಬಗ್ಗೆ ಮಕ್ಕಳ ಆರೈಕೆಗೆ ಇರುವ ತಾತನಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಬಾಕ್ಸ್
ಸಹಾಯ ಮಾಡುವವರು ಈಗಾಗಲೇ ಸಂಪರ್ಕದಲ್ಲಿದ್ದು, ತಬ್ಬಲಿ ಕಂದಮ್ಮಗಳ ತಾತನಿಗೆ ದೂರವಾಣಿ ಇಲ್ಲದೇ ಇರುವುದರಿಂದ ಪತ್ರಿಕೆಯ ಮೂಲಕ ಸಂಪರ್ಕ ಪಡೆಯುವ ಕೆಲಸದಲ್ಲಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಸಹ ಬುಧವಾರ ಉನಿಕಿಲಿ ಬಡಾವಣೆಗೆ ಭೇಟಿ ನೀಡಿ, ವಸತಿ ಮತ್ತು ಮಕ್ಕಳ ಆರೈಕೆ ಬಗ್ಗೆ ಮಾಹಿತಿ ಪಡೆಯುವ ಬಗ್ಗೆ ನಿರ್ದೇಶಕರಾದ ಎಂ.ಶ್ರೀನಿವಾಸನ್ ತಿಳಿಸಿದ್ದಾರೆ.
ಚಿತ್ರ ೨೩ ಕೆ.ಎಲ್.ಆರ್. ೦೫ : ಉನಿಕಿಲಿ ಬಡಾವಣೆಯ ತಬ್ಬಲಿ ಕಂದಮ್ಮಗಳಿಗೆ ಕಣ್ಣು ಕಾಣದ ವೃದ್ಧನ ಆಶ್ರಯದ ಅರಕಲು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ನಿರೂಪಣಾಧಿಕಾರಿ.