ಕೆ.ಆರ್.ನಗರ: ಬ್ಯಾಂಕ್ ವತಿಯಿಂದ ಶೇ.77.99 ರಷ್ಟು ವಸೂಲಾತಿ ಮಾಡಲಾಗಿದ್ದು, ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ. ಹಾಗಾಗಿ, ಕೇಂದ್ರ ಬ್ಯಾಂಕ್‌ನ ವಾರ್ಷಿಕ ಮಹಾ ಸಭೆಯಲ್ಲಿ ಪ್ರಶಂಸನಾ ಫಲಕ ಪಡೆಯಲಿದ್ದೇವೆ ಎಂದು ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಚಂದ್ರಹಾಸ ತಿಳಿಸಿದರು.
ಪಟ್ಟಣದ ರೈತ ಸಮುದಾಯ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕ್‌ನ 2021-22 ನೇ ಸಾಲೀನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ರೈತರು ಸಾಲ ಮರುಪಾವತಿಸದ ಕಾರಣ 1.59 ಲಕ್ಷ ರೂ. ನಷ್ಟವಾಗಿದೆ ಎಂದರು.
ಮಹಾ ಸಭೆಯಲ್ಲಿ ಮಂಡಿಸಲಾದ ವರದಿ ಅನುಮಾನಕ್ಕೆ ಕಾರಣವಾಗಿದೆ. ಆಡಳಿತ ಮಂಡಳಿಯಲ್ಲಿ ಹಿರಿಯ ಸದಸ್ಯರುಗಳಿದ್ದರೂ ಅವರ ಸಲಹೆ ಪಡೆಯದೆ ತಪ್ಪು ವರದಿ ನೀಡುತ್ತಿರುವುದು ಸರಿಯಲ್ಲ ಎಂದು ಸದಸ್ಯರಾದ ಹೆಬ್ಬಾಳ್ ಶಿವಣ್ಣ, ವಡ್ಡರಕೊಪ್ಪಲು ಶಿವರಾಮು ವ್ಯವಸ್ಥಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಸೋಮಣ್ಣ ಮಾತನಾಡಿ, ರೈತರಿಗೆ ಸಾಲ ನೀಡಲು ವಿಳಂಬವಾಗುತ್ತಿದ್ದು, ಮರು ಪಾವತಿ ಮಾಡಲು ಸಾಲಗಾರರಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಸಮುದಾಯ ಭವನವನ್ನು ಬಾಡಿಗೆ ನೀಡಿದ್ದು ಇಲ್ಲಿಯತನಕ ಬಾಕಿ ಉಳಿಸಿಕೊಂಡಿದ್ದ 24ಲಕ್ಷಕ್ಕೂ ಹೆಚ್ಚು ಹಣವನ್ನು ಬಾಡಿಗೆದಾರರಿಂದ ಏಕೆ ವಸೂಲಿ ಮಾಡಿಲ್ಲ ಎಂಬ ವಡ್ಡರಕೊಪ್ಪಲು ಶಿವರಾಮು ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಚಂದ್ರಹಾಸ, ಈಗಾಗಲೇ ಬಾಡಿಗೆದಾರನಿಗೆ ನೋಟಿಸ್ ಜಾರಿ ಮಾಡಿದ್ದು, ಸಮುದಾಯ ಭವನಕ್ಕೆ ಬೀಗ ಜಡಿಯಲಾಗಿದೆ. ಹಣ ಸಂದಾಯ ಮಾಡಿದ ನಂತರ ಅವರಿಗೆ ಸಮುದಾಯ ಭವನವನ್ನು ಹಸ್ತಾಂತರಿಸಲಾಗುವುದು ಎಂದರು.
ಬ್ಯಾಂಕ್‌ನ ಕಟ್ಟಡ ಶಿಥಿಲಗೊಂಡಿದ್ದು, ಹೊಸ ಕಟ್ಟಡ ಕಟ್ಟಲು ಕ್ರಮ ವಹಿಸಲಾಗಿದೆ. ತಾತ್ಕಾಲಿಕವಾಗಿ ಬ್ಯಾಂಕ್‌ನ ಆಡಳಿತವನ್ನು ಸಿಎಂ ರಸ್ತೆಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಬಿ.ಸಿದ್ದೇಗೌಡ, ನಿರ್ದೇಶಕರಾದ ಎನ್.ಸಿ.ಪ್ರಸಾದ್, ಚಿದಂಬರ್, ಸಿ.ಆರ್.ರಮೇಶ್, ಕಲಾವತಿ, ಬಿ.ಎಂ.ಮಲ್ಲಿಖಾರ್ಜುನ್, ಕೆ.ಟಿ.ಚಂದ್ರೇಗೌಡ, ಸಿ.ಎಸ್.ಚಂದ್ರಶೇಖರ್, ರಾಮೇಗೌಡ, ಪ್ರೇಮ, ಸಿದ್ದನಾಯಕ, ಪುಷ್ಪಾ, ಪರಶುರಾಮ್, ಮಲ್ಲಿಖಾರ್ಜುನಪ್ಪ, ವ್ಯವಸ್ಥಾಪಕ ವಿ.ಸೋಮಶೇಖರ್, ಲೆಕ್ಕಧಿಕಾರಿ ಆರ್.ಎಂ. ಗಾಯಿತ್ರಮ್ಮ ಇತರರು ಹಾಜರಿದ್ದರು.