ಹುಣಸೂರು: ತಂಬಾಕು ಕೃಷಿಯಲ್ಲಿ ಆಧುನಿಕ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅಭಿಪ್ರಾಯಪಟ್ಟರು.
ನಗರದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ (ಸಿಟಿಆರ್‌ಐ) ಸಭಾಂಗಣದಲ್ಲಿ ಸಿಟಿಆರ್‌ಐ ಮತ್ತು ರೈತಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ತಂಬಾಕು ಸಸಿಮಡಿಗಳ ನಿರ್ವಹಣೆಯಲ್ಲಿ ಟ್ರೇ ಬಳಕೆಯ ಪಾತ್ರ ಕುರಿತಾದ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊಗೆಸೊಪ್ಪು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. 4 ದಶಕಗಳ ಹಿಂದಿನ ತಂಬಾಕು ಕೃಷಿಯಲ್ಲಿನ ಪದ್ಧತಿಯನ್ನು ಈಗ ಅನುಸರಿಸಲು ಸಾಧ್ಯವಿಲ್ಲ. ತಂಬಾಕು ಕೃಷಿ ಪದ್ಧತಿಯಲ್ಲಿರುವ ಆಧುನಿಕತೆಯನ್ನು ಸಿಟಿಆರ್‌ಐ ವಿಜ್ಞಾನಿಗಳು ರೈತರಿಗೆ ಮಾಹಿತಿ ಒದಗಿಸುತ್ತಲೇ ಬಂದಿದ್ದಾರೆ. ಪ್ರಮುಖವಾಗಿ ಸಸಿಮಡಿಗಳ ನಿರ್ವಹಣೆ, ಇದೀಗ ಟ್ರೇ ಪದ್ಧತಿಯಲ್ಲಿ ಉತ್ತಮ ಗುಣಮಟ್ಟದ ಸಸಿಗಳನ್ನು ಪಡೆಯಲು ಸಾಧ್ಯವಾಗಿದೆ. ಹಾಗಾಗಿ ರೈತರು ವಿಜ್ಞಾನಿಗಳ ಸಲಹೆ ಸೂಚನೆಯಂತೆ ಕೃಷಿಕಾರ್ಯ ಕೈಗೊಂಡಲ್ಲಿ ಉತ್ತಮ ಇಳುವರಿ ಸಾಧ್ಯವಾಗಲಿದೆ ಎಂದರು.
ಕಾಪ್ ಕಮಿಟಿ ರಚನೆಯಾಗಿದೆ: ಈ ಬಾರಿ 2- 3 ತಿಂಗಳು ಮುಂಚಿತವಾಗಿಯೇ ರೈತರು, ಖರೀದಿದಾರರು ಮತ್ತು ಮಂಡಳಿ ಸದಸ್ಯರನ್ನು ಒಳಗೊಂಡ ಕಾಪ್ ಕಮಿಟಿ ರಚನೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ಸಾಲಿನಲ್ಲಿ ರಸಗೊಬ್ಬರ ಪಡೆಯಲು ಇದೀಗ ರೈತರು ಡಿಸೆಂಬರ್ ಅಂತ್ಯದೊಳಗೆ ತಮ್ಮಲ್ಲಿರುವ ಹೊಗೆಸೊಪ್ಪನ್ನು ಮಾರಾಟ ಮಾಡಬಹುದು. ಈ ಮೂಲಕ ಕಾಪ್‌ಕಮಿಟಿಗೆ ರಾಸಾಯನಿಕ ಗೊಬ್ಬರದ ಅವಶ್ಯಕತೆ ಪ್ರಮಾಣದೊಂದಿಗೆ, ರೈತರಿಗೆ ಅನುಕೂಲವಾಗುವಂತಹ ದರ ನಿಗದಿಗೂ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೇ ಉತ್ತಮ ರಸಗೊಬ್ಬರವನ್ನು ಪಡೆಯುವ, ಪೂರೈಕೆಯಲ್ಲಿನ ವ್ಯತ್ಯಾಸಗಳನ್ನು ಮಾತುಕತೆ ಮೂಲಕ ಸರಿಪಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಸಿಟಿಆರ್‌ಐ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಮಾತನಾಡಿ, ತಂಬಾಕು ಸಸಿಗೆ ಸೊರಗು ರೋಗ, ಕಾಂಡಕೊರೆತ ರೋಗ ತಗುಲದಂತೆ ಕ್ರಮವಹಿಸಲು ಟ್ರೇ ಪದ್ಧತಿ ಅಳವಡಿಕೆ ಸೂಕ್ತ. ಪೊಟಾಷಿಯಂ ಬಳಕೆಯ ಕುರಿತು ರೈತರು ಗಮನಿಸಬೇಕು. ಸಿಟಿಆರ್‌ಐ ಕಾಲಕಾಲಕ್ಕೆ ರೈತರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಅದನ್ನು ಅನುಸರಿಸುವ ಮೂಲಕ ಉತ್ತಮ ಬೆಳೆ ಪಡೆಯಬೇಕೆಂದು ಕೋರಿದರು.
ಕಾಪ್ ಕಮಿಟಿ ಕಾರ್ಯದರ್ಶಿ ಡಿ.ಸ್ವಾಮಿ ಮಾತನಾಡಿ, ತಂಬಾಕು ಕೃಷಿಯಲ್ಲಿ ಆರಂಭದಿಂದ ಅಂತ್ಯದವರೆಗೆ 18 ಹಂತಗಳಿದ್ದು, ಈ ಎಲ್ಲ ಹಂತಗಳಲ್ಲೂ ರೈತರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಲಾಭ ಗಳಿಸಬೇಕಿದೆ ಎಂದರು.
ಕೇಂದ್ರದ ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ ಟ್ರೇ ಪದ್ಧತಿಯ ಬಳಕೆ ಕುರಿತು ಮಾಹಿತಿ ಒದಗಿಸಿದರು. ಕಾಪ್‌ಕಮಿಟಿ ಉಪಾಧ್ಯಕ್ಷ ಶೇಷಪ್ಪ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಮುಖಂಡರಾದ ಕೃಷ್ಣಮೂರ್ತಿ, ಅಶೋಕ್‌ಕುಮಾರ್, ಬಸವರಾಜೇಗೌಡ, ನಂಜೇಶ್, ಚಿಕ್ಕತಿಮ್ಮಪ್ಪ, ಸತೀಶ್ ಅಣ್ಣೂರು ಕಾಳೇಗೌಡ, ಧನಂಜಯ, ವಿಜ್ಞಾನಿಗಳಾದ ಡಾ.ರಾಜಪ್ಪ, ಡಾ.ನಂದ ಇತರರು ಇದ್ದರು.